ಚಿತ್ರದುರ್ಗ: ಕಬೀರಾನಂದ ಆಶ್ರಮದಲ್ಲಿ ನಡೆಯುವ ಮಹಾಶಿವರಾತ್ರಿ ಮಹೋತ್ಸವ ನಾಡ ಹಬ್ಬದ ರೀತಿಯಲ್ಲಿ ಜರುಗಬೇಕಿದ್ದು, ಸಂಭ್ರಮದ ಸ್ಪರ್ಶ ನೀಡುವ ಅಗತ್ಯವಿದೆ ಎಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ಸದ್ಗುರು ಕಬೀರಾನಂದಾಶ್ರಮದವತಿಯಿಂದ ನಡೆಯುವ 94ನೇ ಶಿವನಾಮ ಸಪ್ತಾಹ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದ ಅವರು ಶಿವರಾತ್ರಿ ವೇಳೆ ನಾಡಿನ ಬೇರೆ ಮಠಗಳು ಒಂದು ದಿನಕ್ಕೆ ಸೀಮಿತವಾಗಿ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಕಬೀರಾನಂದ ಆಶ್ರಮೋ ವಾರವಿಡೀ ಕಾರ್ಯಕ್ರಮ ಆಯೋಜಿಸಿ ಶಿವನಾಮ ಸ್ಮರಣೆಯ ದಾಸೋಹ ಉಣಬಡಿಸುತ್ತದೆ. ಈ ಬಾರಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಕೈ ಜೋಡಿಸಬೇಕೆಂದು ವಿನಂತಿಸಿದರು.ಆರಂಭದಲ್ಲಿ ಚಿಕ್ಕದಾಗಿ ಪ್ರಾರಂಭವಾದ ಮಹಾಶಿವರಾತ್ರಿ ಮಹೋತ್ಸವ ಈಗ ದೊಡ್ಡದಾಗಿ ಆಚರಣೆಗೆ ಒಳಪಟ್ಟಿದೆ. ಕರ್ನಾಟಕ ವ್ಯಾಪ್ತಿಗೆ ಬಂದಿದೆ. ಕಾರ್ಯಕ್ರಮದ ಮೂಲಕ ಕಬೀರಾನಂದ ಶ್ರೀಗಳು ವೈಚಾರಿಕ ತತ್ವಗಳು, ಶಿವನಾಮಕ್ಕೆ ಸಂಬಂಧಪಟ್ಟಂತೆ ಶಿವನಾಮ ಸ್ತೋತ್ರಗಳು, ಭಾರತದ ಸನಾತನ ಧರ್ಮ ಹಾಗೂ ಪ್ರಗತಿಪರವಾದ ಚಿಂತನೆಗಳಿಗೆ ವೇದಿಕೆಯನ್ನು ಒದಗಿಸುತ್ತಿದ್ದಾರೆ. ಈ ಮಹೋತ್ಸವದ ಅಧ್ಯಕ್ಷರಾಗಿ ವಿವಿಧ ರೀತಿಯ ಗಣ್ಯರು ಕೆಲಸವನ್ನು ಮಾಡಿದ್ದಾರೆ. ನಾವು ನೀವು ಎಲ್ಲರು ಸಹಾ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡಬೇಕಿದೆ. ಶ್ರೀಗಳು ಬೇರೆಯವರಿಂದ ಸಹಾಯವನ್ನು ಕೇಳಲು ಸಹಾ ಹಿಂಜರಿಯುತ್ತಾರೆ. ನಾವೆಲ್ಲರೂ ಕೈಲಾದ ಧನಸಹಾಯವನ್ನು ಮಾಡುವುದರ ಮೂಲಕ ಶ್ರೀಗಳಿಗೆ ನೆರವಾಗಬೇಕಿದೆ ಎಂದು ಮಾದಾರಶ್ರೀ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶಿವಲಿಂಗಾನಂದ ಶ್ರೀಗಳು ಮಾತನಾಡಿ, 94ನೇ ಶಿವರಾತ್ರಿ ಮಹೋತ್ಸವವೂ ಯಶಸ್ಸಿಯಾಗಿ ನಡೆಯಲು ಜನತೆ ಹಲವಾರು ವಿವಿಧ ರೀತಿಯ ಸಲಹೆಯನ್ನು ನೀಡಿದ್ದಾರೆ. ಅವುಗಳನ್ನು ಸ್ವೀಕಾರ ಮಾಡುವುದರ ಮೂಲಕ ಮುಂದಿನ ದಿನದಲ್ಲಿ ರೂಪುರೇಷೆಗಳನ್ನು ತಯಾರಿಸಲಾಗುವುದು. ನಿಮ್ಮೆಲ್ಲರ ಸಹಾಯ ಮತ್ತು ಸಹಕಾರ ಶ್ರೀಮಠಕ್ಕೆ ಇರಲಿ, ನಿಮ್ಮ ನೆರವಿನೊಂದಿಗೆ ಮಹಾ ಶಿವರಾತ್ರಿ ಮಹೋತ್ಸವ ನಡೆಯಬೇಕಿದೆ ಎಂದರು.ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಶ್ರೀಗಳು ತಾಯಿಯ ಹೃದಯದಂತೆ. ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. 94ನೇ ಶಿವರಾತ್ರಿ ಮಹೋತ್ಸವವನ್ನು ಯಶಸ್ವಿಯಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ಮಹೋತ್ಸವವಕ್ಕೆ 25 ಸಾವಿರ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ನಗರಾಭಿವೃಧ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್ ಮಾತನಾಡಿ, ಭಕ್ತರ ಸಹಕಾರ ಶ್ರೀಗಳ ಮಾರ್ಗದರ್ಶನದಲ್ಲಿ 94ನೇ ಶಿವರಾತ್ರಿ ಮಹೋತ್ಸವ ಚೆನ್ನಾಗಿ ಮೂಡಿಬರಬೇಕಿದೆ. ದೇಣಿಗೆ ಸಂಗ್ರಹದಲ್ಲಿಯೂ ಪ್ರಗತಿ ಕಾಣಬೇಕಿದೆ ಎಂದರು.ಬಿಜೆಪಿ ಮುಖಂಡ ಅನಿತ್ ಕುಮಾರ್ ಮಾತನಾಡಿ, ಕಳೆದ ಬಾರಿ ಅಧ್ಯಕ್ಷರಾಗಿ ಸೇವೆ ಮಾಡಲು ಅವಕಾಶವನ್ನು ಕಲ್ಪಿಸಲಾಯಿತು. ಇದರಿಂದ ನಾನು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಲು ಸಹಾಯವಾಯಿತೆಂದು ತಿಳಿಸಿದರು.ಚಳ್ಳಕೆರೆ ನಗರಸಭೆಯ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಶ್ರೀಗಳ ನನ್ನ ಸಂಬಂಧ 92ರಿಂದಲೂ ಇದೆ. ಈ ಮಹೋತ್ಸವದಲ್ಲಿ ಶ್ರೀಗಳು ನೀಡಿದ ನಿರ್ದೆಶನದಂತೆ ಕೆಲಸವನ್ನು ಮಾಡಲಾಗುವುದೆಂದು ತಿಳಿಸಿದರು. ಕಭೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ಮಾತನಾಡಿ, ಕಳೆದ 93ನೇ ಶಿವರಾತ್ರಿ ಮಹೋತ್ಸವದಲ್ಲಿ 22 ಲಕ್ಷ ರು.ಗಳನ್ನು ವೆಚ್ಚ ಮಾಡುವುದರ ಮೂಲಕ ನಡೆಸಲಾಯಿತು, ಈ ಬಾರಿ 94ನೇ ಶಿವರಾತ್ರಿ ಮಹೋತ್ಸವದ ವೆಚ್ಚವನ್ನು 25 ಲಕ್ಷ ರು ಗಳಿಗೆ ನಿಗಧಿ ಮಾಡಲಾಗಿದೆ. ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಇತಿಹಾಸ ಸಂಶೋಧಕರಾದ ಪ್ರೋ.ಶ್ರೀಶೈಲಾರಾಧ್ಯರವರ ನಿಧನಕ್ಕೆ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು. ಉಜ್ಜನಪ್ಪ, ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಓಂಕಾರ್, ರೇಖಾ, ಜೆಡಿಎಸ್‍ನ ಗೋಪಾಲಸ್ವಾಮಿ ನಾಯಕ್, ಬಿಜೆಪಿಯ ನಂದಿ ನಾಗರಾಜ್, ಮಂಜುನಾಥ್ ಗುಪ್ತ, ನಗರಸಭಾ ಸದಸ್ಯರಾದ ವೆಂಕಟೇಶ್, ವರ್ತಕರಾದ ವೆಂಕಟೇಶ್, ರಾಮಮೂರ್ತಿ ಇದ್ದರು.