ಕಾರವಾರ: ದೇವಾಲಯಗಳ ಗಂಟಾನಾದ, ಭಕ್ತರ ಜಯಘೋಷದ ನಡುವೆ ಜಿಲ್ಲೆಯಲ್ಲಿ ಶರನ್ನವರಾತ್ರಿಯ ಸಂಭ್ರಮ ಮನೆಮಾಡಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ದೇವಿ ದೇವಸ್ಥಾನಗಳು ನವರಾತ್ರಿ ಸಂದರ್ಭದಲ್ಲಿ ಭಕ್ತರ ಆಕರ್ಷಣೆಯ ಕೇಂದ್ರಗಳಾಗುತ್ತವೆ. ಮನೆಗಳಲ್ಲಿ ಘಟಸ್ಥಾಪನೆ, ದೀಪಾರಾಧನೆ, ದೇವಿಗೆ ಹೂವಿನ ಅಲಂಕಾರ, ನೈವೇದ್ಯ ಸಮರ್ಪಣೆ ನಡೆದರೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ಮತ್ತು ಭಕ್ತರಿಗೆ ದೇವಿ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ.
ಶಕ್ತಿ ಆರಾಧನೆಯ ಪ್ರಮುಖ ಕೇಂದ್ರವಾಗಿರುವ ಶಿರಸಿ ಮಾರಿಕಾಂಬೆಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ದೇವಿಯ ಅಲಂಕಾರಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಬಾರಿಯ ನವರಾತ್ರಿ ಉತ್ಸವ ಅ. 11ರಿಂದ 20ರವರೆಗೆ ನಡೆಯಲಿದ್ದು, ಅ. 11ರಿಂದ 19ರ ವರೆಗೆ ದೇವಸ್ಥಾನದ ಸಭಾಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಕಾರವಾರ ತಾಲೂಕಿನ ಸದಾಶಿವಗಡ ದುರ್ಗಾದೇವಿ, ಸಂತೋಷಿಮಾತಾ, ಸಮಾದೇವಿ, ಅಂಕೋಲಾದ ಆರ್ಯಾದುರ್ಗಾ, ಕುಮಟಾ ಬಾಡ ಕಾಂಚಿಕಾಂಬಾ, ಹೊನ್ನಾವರದ ಕರಿಕಾನ ಪರಮೇಶ್ವರಿ, ಭಟ್ಕಳದ ದುರ್ಗಾಪರಮೇಶ್ವರಿ, ಸಿದ್ದಾಪುರದ ಭುವನೇಶ್ವರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದಿನಕ್ಕೊಂದು ಅಲಂಕಾರದಲ್ಲಿ ಕಂಗೊಳಿಸುವ ದೇವಿ ಭಕ್ತರ ಆಕರ್ಷಣೆಯಾಗಿದೆ.
ದಾಂಡಿಯಾ ಪ್ರಮುಖ ಆಕರ್ಷಣೆ
ದೇವಸ್ಥಾನಗಳ ಸಭಾಮಂಟಪಗಳು ಹಾಗೂ ಸ್ಥಳೀಯ ಸಾಂಸ್ಕೃತಿಕ ವೇದಿಕೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತವೆ.