ವಿಶ್ವಕರ್ಮರ ಕಾಯಕಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯ: ನಟರಾಜ್ ಸೋನಾರ್

KannadaprabhaNewsNetwork |  
Published : Sep 24, 2026, 02:15 AM IST
ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕ ನಟರಾಜ್ ಸೋನಾರ್ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ನಡೆಯಿತು.

ಕುಷ್ಟಗಿ: ರೆಡಿಮೇಡ್ ಯುಗ ಹಾಗೂ ಬದಲಾಗುತ್ತಿರುವ ಜನರ ಅಭಿರುಚಿಯಿಂದ ಸಾಂಪ್ರದಾಯಿಕ ಕಾಯಕಗಳು ಸವಾಲು ಎದುರಿಸುತ್ತಿರುವ ಸಂದರ್ಭದಲ್ಲಿ, ವಿಶ್ವಕರ್ಮ ಸಮಾಜ ತನ್ನ ಕಲೆ, ಕಸುಬು ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡೇ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕಾಲದೊಂದಿಗೆ ಹೆಜ್ಜೆ ಹಾಕುವ ಅಗತ್ಯವಿದೆ ಎಂದು ಶಿಕ್ಷಕ ನಟರಾಜ್ ಸೋನಾರ್ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ಶ್ರೀ ವಿಶ್ವಕರ್ಮ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ವಿಶ್ವಕರ್ಮ ಸಮಾಜವು ಕಾಯಕವನ್ನು ನಂಬಿ ಬದುಕುವ ಸಮಾಜವಾಗಿದ್ದು, ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ಮಾಡುವ ಕಾಯಕದಲ್ಲಿಯೇ ಭಗವಂತನನ್ನು ಕಾಣುವ ಸಂಸ್ಕೃತಿ ಈ ಸಮಾಜದ್ದಾಗಿದೆ ಎಂದರು.

ಅಕ್ಕಸಾಲಿಗರ ಬದುಕು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಜನರು ಫ್ಯಾನ್ಸಿ ಆಭರಣಗಳು ಹಾಗೂ ರೆಡಿಮೇಡ್ ವಸ್ತುಗಳತ್ತ ಹೆಚ್ಚು ವಾಲುತ್ತಿರುವುದರಿಂದ ಸಾಂಪ್ರದಾಯಿಕ ಕಸುಬಿನ ಮೇಲೆ ಪರಿಣಾಮ ಬೀರುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ಹಳೆಯ ಕೌಶಲ್ಯದ ಜತೆಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಹಿರಿಯರು ಕಟ್ಟಿಕೊಟ್ಟ ಆಸ್ತಿ, ಕಲೆ, ಕಸುಬು ಹಾಗೂ ಸಂಸ್ಕೃತಿ ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಗೆ ಯುವಜನರು ಹೊಸ ಕೌಶಲ್ಯಗಳನ್ನು ಬೆಳೆಸಿಕೊಂಡು ಸ್ವಾವಲಂಬಿಗಳಾಗಬೇಕು. ಕಾಲದೊಂದಿಗೆ ಓಡುತ್ತಲೇ ನಮ್ಮ ಮೂಲ ಸಂಸ್ಕೃತಿ ಹಾಗೂ ಪರಂಪರೆ ಮರೆಯಬಾರದು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ವಿಶ್ವಕರ್ಮ ಜಯಂತಿಯನ್ನು ಎಲ್ಲರೂ ಆಚರಿಸುವಂತಾಗಬೇಕು ಎಂದರು. ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಬಡಿಗೇರ್ ಮಾತನಾಡಿ, ಸಮಾಜದವರು ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಹೇಳಿದರು.

ಪ್ರಭಾರಿ ಬಿಇಒ ಯಮನೂರಪ್ಪ ಚೂರಿ ಮಾತನಾಡಿದರು. ಗ್ರೇಡ್–2 ತಹಸೀಲ್ದಾರ್ ರಜನಿಕಾಂತ ಕೆಂಗೇರಿ, ಸಿದ್ದಪ್ಪ ಬಡಿಗೇರ, ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿದೇವಿ ಬಡಿಗೇರ, ಮೌನೇಶ್ ಸೋನಾರ, ಅನಿಲಕುಮಾರ ಕಮ್ಮಾರ ಉಪಸ್ಥಿತರಿದ್ದರು. ನಾಗರಾಜ್ ಬಡಿಗೇರ್ ಪ್ರಾರ್ಥನೆ ನೆರವೇರಿಸಿದರು. ಶರಣಪ್ಪ ಹುಡೇದ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರಕಾರ್ಮಿಕರ ಸೇವೆ ಸಮಾಜಕ್ಕೆ ಅಮೂಲ್ಯ: ರೆಡ್ಡಿ ರಾಯನಗೌಡ
ರೈತರಲ್ಲಿ ಉತ್ಸಾಹ ಹೆಚ್ಚಿಸಿದ ಉತ್ತರಿ ಮಳೆ