ಮುಸ್ಲಿಮರಿಲ್ಲದ ಊರಿನಲ್ಲಿ ಸಂಪ್ರದಾಯಬದ್ಧ ಮೊಹರಂ ಆಚರಣೆ

KannadaprabhaNewsNetwork | Published : Jul 16, 2024 12:32 AM

ಸಾರಾಂಶ

ಈ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರೇ ಇಲ್ಲ. ಆದರೆ, ಶ್ರದ್ಧಾಭಕ್ತಿಯಿಂದ ಎಲ್ಲ ಸಂಪ್ರದಾಯ ಪಾಲಿಸುವ ಮೂಲಕ ಮೊಹರಂನ ಆಚರಿಸಲಾಗುತ್ತದೆ.

ಭಾವೈಕ್ಯದ ಸಂದೇಶ ಸಾರುತ್ತಿರುವ ಹಿಂದೂಗಳು

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಈ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರೇ ಇಲ್ಲ. ಆದರೆ, ಶ್ರದ್ಧಾಭಕ್ತಿಯಿಂದ ಎಲ್ಲ ಸಂಪ್ರದಾಯ ಪಾಲಿಸುವ ಮೂಲಕ ಮೊಹರಂನ ಆಚರಿಸಲಾಗುತ್ತದೆ.

ಹೌದು. ಇದು ತಾಲೂಕಿನ ಹೆಸರೂರು ಹಾಗೂ ಜಾಲಿಹಾಳ, ರ್‍ಯಾವಣಕಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಕಂಡುಬರುವ ವಿಶೇಷ. ಈ ಗ್ರಾಮಗಳಲ್ಲಿ ಹಲವು ದಶಕಗಳಿಂದ ಹಿಂದೂಗಳು ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಚಾಚೂ ತಪ್ಪದೆ ಆಚರಿಸುತ್ತ ಬಂದಿದ್ದು, ಭಾವೈಕ್ಯದ ಸಂದೇಶ ಸಾರುತ್ತಿದ್ದಾರೆ.

ದೋಟಿಹಾಳ ಗ್ರಾಮದ ಮುಸ್ಲಿಂ ಸಮುದಾಯದ ಕುಟುಂಬದವರು ಬಂದು ಈ ಗ್ರಾಮದಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸುತ್ತಾರೆ. ಎಲ್ಲ ಧಾರ್ಮಿಕ ಆಚರಣೆಗಳನ್ನು ಅವರೇ ನೆರವೇರಿಸುತ್ತಾರೆ. ಇದಕ್ಕೆ ಸ್ಥಳೀಯರು ಸಾಥ್ ನೀಡುತ್ತಾರೆ. ಹರಕೆ ಹೊತ್ತ ಮನೆಗಳಿಗೆ ದೇವರು ಹೋದಾಗ ಸಂತಾನ ಭಾಗ್ಯ, ಮಳೆ, ಬೆಳೆ ಆರೋಗ್ಯದ ಕುರಿತು ಬೇಡಿಕೊಳ್ಳುತ್ತಾರೆ.

ಮಸೀದಿಯಲ್ಲಿ ಪ್ರತಿಷ್ಠಾಪಿಸಿರುವ ಅಲಾಯಿ ದೇವರುಗಳಿಗೆ ಹರಕೆ ಹೊತ್ತವರು ಸಕ್ಕರೆ, ಬೆಳ್ಳಿ ತೊಟ್ಟಿಲು, ಛತ್ರಿ, ಕುದುರೆ, ಹೂವಿನಹಾರ, ಬಟ್ಟೆಗಳನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸುತ್ತಾರೆ. ಮೊಹರಂ ಅಂಗವಾಗಿ ಕೊನೆಯ ಅಲಾಯಿ ಕುಣಿಯ ಮುಂದೆ ಹಾಗೂ ದೇವರ ವಿಸರ್ಜನೆ ದಾರಿಯಲ್ಲಿ ಗೆಜ್ಜೆ ಕುಣಿತ, ಅಲಾಯಿ ಕುಣಿತ, ವಿವಿಧ ವೇಷಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಾರೆ.

ಕತ್ತಲ್ ರಾತ್ರಿ ದಿನ ಹೊಸ ಬಿಂದಿಗೆಯಲ್ಲಿ ಬೆಲ್ಲದ ಪಾನಕ, ರೊಟ್ಟಿ, ಸಕ್ಕರೆಯನ್ನು ದೇವರಿಗೆ ನೈವೇದ್ಯ ನೀಡಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಮೊಹರಂ ಕೊನೆಯ ದಿನ ಗ್ರಾಮದಲ್ಲಿ ಪೀರಲದೇವರ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತದೆ. ವಾದ್ಯ ಮೇಳ, ಹಲಗಿ ಮೇಳ, ಶಹನಾಯಿ ವಾದನ ಮೆರವಣಿಗೆಗೆ ಕಳೆ ತರುತ್ತವೆ.

ಅಲಾಯಿ ದೇವರನ್ನು ಸ್ಥಾಪಿಸಿರುವ ಮಸೀದಿಗಳಿಗೆ ಮುಲ್ಲಾಗಳನ್ನು ಕರೆಸಿ ಪೂಜೆ ಸಲ್ಲಿಸುತ್ತಾರೆ. ಅಲಾಯಿ ದೇವರ ಪೂಜೆಯನ್ನು ಹೊರತು ಪಡಿಸಿ ಉಳಿದೆಲ್ಲ ಕಾರ್ಯಗಳನ್ನು ಹಿಂದೂಗಳು ಶ್ರದ್ಧಾಭಕ್ತಿಯಿಂದ ನಡೆಸಿಕೊಡುತ್ತಾರೆ. ಹಬ್ಬದ ಹಿಂದಿನ ದಿನ ಮಂದಿರದ ಎದುರು ತೆಗೆದ ಹೊಂಡದಲ್ಲಿ ರಾತ್ರಿ ಕಟ್ಟಿಗೆ ಹಾಕಿ ಬೆಂಕಿ ಹಾಕುತ್ತಾರೆ. ನಂತರ ಸುಡುವ ಬೆಂಕಿಯಲ್ಲಿ ಭಕ್ತರು ಭಕ್ತಿಯಿಂದ ನಡೆದುಕೊಂಡು ಹೋಗುತ್ತಾರೆ. ಹಬ್ಬದಂದು ದೇವರನ್ನು ಹೊತ್ತವರು ಬೆಂಕಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಸುಮಾರು ದಶಕಗಳಿಂದ ಈ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ಇಲ್ಲದೆ ಇದ್ದರೂ ಸಹಿತ ಹಿಂದೂಗಳು ಸಡಗರದಿಂದ ಮೊಹರಂ ಆಚರಿಸುತ್ತಾರೆ.

ದೋಟಿಹಾಳ ಗ್ರಾಮದ ಮುಸ್ಲಿಂ ಸಮುದಾಯದವರೊಬ್ಬರನ್ನು ನಮ್ಮೂರಿಗೆ ಕರೆಯಿಸಿ ಅವರ ಮಾರ್ಗದರ್ಶನದಲ್ಲಿ ಐದು ದಿನ ಅಲಾಯಿ ದೇವರ ಪೂಜೆ, ಪುನಸ್ಕಾರ, ಧಾರ್ಮಿಕ ವಿಧಿ ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ಮಾಡುತ್ತೇವೆ. ಮೊಹರಂ ಕೊನೆಯ ದಿನ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ ಎಂದು ಹೆಸರೂರು ಗ್ರಾಮದ ನಿವಾಸಿ ಪ್ರಶಾಂತಕುಮಾರ ಹಿರೇಮಠ ತಿಳಿಸಿದ್ದಾರೆ.

Share this article