ಭದ್ರಾ ಮೇಲ್ದಂಡೆಗೆ ಕೇಂದ್ರದಿಂದ ದ್ರೋಹದ ಮಾರ್ಗ : ನೀರಾವರಿ ಅನುಷ್ಠಾನ ಹೋರಾಟ ಸಮಿತಿ

KannadaprabhaNewsNetwork |  
Published : Sep 12, 2024, 02:02 AM ISTUpdated : Sep 12, 2024, 11:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಜೆ.ಯಾದವರೆಡ್ಡಿ ಮಾತನಾಡಿದರು.

 ಚಿತ್ರದುರ್ಗ :  ಭದ್ರಾ ಮೇಲ್ದಂಡೆಗೆ ಅನುದಾನ ನೀಡುವ ತನ್ನ ಬದ್ಧತೆ ಪ್ರದರ್ಶಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರ ದ್ರೋಹದ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆರೋಪಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪದಾಧಿಕಾರಿಗಳು, ಸೆ.5 ರಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ, ಯೋಜನೆಗೆ ಕೇಂದ್ರ ಸರ್ಕಾರವೇ ಎಲ್ಲ ತಾಂತ್ರಿಕ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು ಹಣ ಬಿಡುಗಡೆ ವೇಳೆಗೆ ಖ್ಯಾತೆ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ಖರ್ಚು ವೆಚ್ಚ, ಯೋಜನೆ ಪೂರ್ಣಗೊಳಿಸಲು ಬೇಕಾದ ಬಾಕಿ ಮೊತ್ತದ ಆಧಾರದ ಮೇಲೆ ಕೇಂದ್ರ ನೆರವು ನೀಡುತ್ತದೆ. ಭೌಗೋಳಿಕ ಹಂಚಿಕೆ ಹಾಗೂ ಹಣಕಾಸು ಲಭ್ಯತೆ ನೋಡಿಕೊಳ್ಳಬೇಕಾಗುತ್ತದೆ ಎಂಬ ಅಂಶವ ದೇಬರ್ಶಿ ಮುಖರ್ಜಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಪತ್ರ ಬರೆಯುವಾಗ ವಿವೇಚನಾ ರಹಿತವಾಗಿ ನಡೆದುಕೊಳ್ಳಲಾಗಿದೆ. ಅನುದಾನ ನೆರವು ನೀಡುವುದು ಮತ್ತೊಂದಿಷ್ಟು ದಿನ ಮುಂದಕ್ಕೆ ಹಾಕುವ ಉದ್ದೇಶ ಇದರ ಹಿಂದೆ ಅಡಗಿದೆ ಎಂದು ಸಮಿತಿ ದೂರಿದೆ.

ಐದು ಹಂತದ ಸಮಿತಿಗಳ ಮುಂದೆ ಭದ್ರಾ ಮೇಲ್ದಂಡೆ ಪ್ರಸ್ತಾವನೆ ಹೋಗಿ ಅಂತಿಮವಾಗಿ ಅನುಮೋದನೆಗೊಂಡಿದೆ. ರಾಜ್ಯ ಸರ್ಕಾರದಿಂದ ಯಾವುದೇ ತಾಂತ್ರಿಕ ಮಾಹಿತಿ ಪೂರೈಕೆ ಅಗತ್ಯವಿಲ್ಲ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಖುದ್ದು ಆಸಕ್ತಿ ವಹಿಸಿ, ಎಲ್ಲ ತಾಂತ್ರಿಕ ಅಡಚಣೆಗಳ ನಿವಾರಿಸಿ ಭದ್ರಾ ಮೇಲ್ದಂಡೆ ಯೋಜನೆ ಪ್ರಸ್ತಾವನೆಯ ಕೇಂದ್ರದ ಮುಂದೆ ಮಂಡಿಸಿದ್ದರು. ಡಿಸೆಂಬರ್‌ 24-2020 ರಂದು ನಡೆದ ಜಲಶಕ್ತಿ ಸಚಿವಾಲಯದ 147ನೇ ಸಭೆಯಲ್ಲಿ ಸಲಹಾ ಸಮಿತಿ ಯೋಜನೆ ಸ್ವೀಕಾರ ಮಾಡಿತ್ತು. ಮಾರ್ಚ-25-2021 ರಂದು ನಡೆದ ಇನ್ ವೆಸ್ಟ್ ಮೆಂಟ್ ಕ್ಲಿಯರೆನ್ಸ್ ಸಮಿತಿ 16,125 ಕೋಟಿ ರು. ವೆಚ್ಚದ ಯೋಜನೆಗೆ ಒಪ್ಪಿಗೆ ಸೂಚಿಸಿತ್ತು. ಎಪ್ರಿಲ್‌17 2021 ರಂದು ನಡೆದ ಮತ್ತೊಂದು ಸಭೆಯಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗುವ ಎಲ್ಲ ಅರ್ಹತೆ ಇರುವುದನ್ನು ದೃಢೀಕರಿಸಲಾಗಿತ್ತು.

ಫೆ.15-2022 ರಂದು ನಡೆದ ಹೈ ಪವರ್ ಸ್ಟೀರಿಂಗ್ ಕಮಿಟಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಘೋಷಿಸಬಹುದು ಎಂದು ಶಿಫಾರಸು ಮಾಡಿತು. ಅಕ್ಟೋಬರ್‌ 25- 2022 ರಂದು ನಡೆದ ಸಾರ್ವಜನಿಕ ಬಂಡವಾಳ ಹೂಡಿಕೆ ಸಮಿತಿ ಯೋಜನೆಗೆ 5300ಕೋಟಿ ರುಪಾಯಿ ಅನುದಾನದ ನೆರವು ನೀಡಬಹುದು ಎಂದು ಶಿಪಾರಸ್ಸು ಮಾಡಿತು. ನಂತರ ಫೆ.1-2023 ರಂದು ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಮಂಡಿಸಿದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರು ಅನುದಾನ ಒದಗಿಸುವ ಘೋಷಣೆ ಮಾಡಿದ್ದರು.

ತಾವೇ ಯೋಜನೆ ತಯಾರಿಸಿ ಕೇಂದ್ರದ ನೆರವಿಗಾಗಿ ಶ್ರಮಿಸಿದ ರಾಜ್ಯದ ಬಿಜೆಪಿ ಸಂಸದರು ಈಗ ಕೇಂದ್ರದಿಂದ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಮೌನ ವಹಿಸಿರುವುದು ಅರ್ಥವಾಗದಂತಾಗಿದೆ. ಪಕ್ಷ ರಾಜಕಾರಣ ಬದಿಗೆ ಸರಿಸಿ ಜನರ ಪರವಾಗಿ ನಿಲ್ಲುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಲಹೆ ಮಾಡಿದೆ.

ರಾಜ್ಯದ ಬಿಜೆಪಿ ಸಂಸದರು ಭದ್ರಾ ಮೇಲ್ದಂಡೆ ವಿಚಾರದಲ್ಲಿ ಬದ್ದತೆ ಪ್ರದರ್ಶಿಸಬೇಕು. ಸಚಿವ ನಿರ್ಮಲಾ ಸೀತರಾಮನ್, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಕೇಂದ್ರದಿಂದ ದ್ರೋಹವಾಗದಂತೆ ನೋಡಿಕೊಳ್ಳಬೇಕೆಂದು ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಸರ್ವೋದಯ ಕರ್ನಾಟಕದ ಮುಖ್ಯಸ್ಥ ಜೆ.ಯಾದವೆರೆಡ್ಡಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

₹1800 ಕೋಟಿ ಅನುದಾನ ಖೋತಾ:

ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ಬರೆದ ಪತ್ರದ ಅನುಸಾರ ರಾಜ್ಯ ಸರ್ಕಾರವೇನಾದರೂ ಪಾಲನೆ ಮಾಡಿದಲ್ಲಿ ಕೇಂದ್ರದಿಂದ ಬರಬೇಕಾದ 5300 ಕೋಟಿ ರು ಅನುದಾನದಲ್ಲಿ 1800 ಕೋಟಿ ರು ಖೋತವಾಗುತ್ತದೆ.

ಮಾರ್ಚ್ 2022 ರವರೆಗೆ ಖರ್ಚು ಮಾಡಿದ ಅನುದಾನ ಆಧರಿಸಿ 5300 ಕೋಟಿ ರು ಕೇಂದ್ರದಿಂದ ಲಭ್ಯವಾಗಬೇಕಿತ್ತು. ಅಂದರೆ 14,697 ಕೋಟಿ ರು.ಒಟ್ಟಾರೆ ಯೋಜನಾ ವೆಚ್ಚದಲ್ಲಿ ₹5528 ಕೋಟಿ ರುಪಾಯಿಯಷ್ಟು ರಾಜ್ಯ ಸರ್ಕಾರ ಖರ್ಚು ಮಾಡಿತ್ತು. ಉಳಿದ 9,168 ಕೋಟಿ ರುಪಾಯಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.60 ರಷ್ಟು ಮೊತ್ತ 5,501 ಕೋಟಿ ಕೊಡಬೇಕಾಗಿದ್ದು ಅದನ್ನು 5300 ಕೋಟಿಗೆ ಸೀಮಿತಗೊಳಿಸಲಾಗಿತ್ತು.

ಹಾಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ಬರೆದ ಪತ್ರದ ಪ್ರಕಾರ ಇಲ್ಲಿಯವರೆಗೆ ಎಂಬ ಸಂಗತಿ ಪಾಲಿಸಿದರೆ ಅನುದಾನ ಖೋತ ಗ್ಯಾರಂಟಿ. ಕಳೆದ ಮಾರ್ಚ್ 2024 ರವರೆಗೆ ಭದ್ರಾ ಮೇಲ್ದಂಡೆಗೆ 8785ಕೋಟಿ ರು ಖರ್ಚು ಮಾಡಲಾಗಿದ್ದು 5910 ಕೋಟಿ ರುಪಾಯಿ ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಶೇ.60 ರಷ್ಟು ಅನುದಾನವ ಕೇಂದ್ರ ಸರ್ಕಾರ ನೀಡಿದ್ದಲ್ಲಿ 3546 ಕೋಟಿ ರು ಮಾತ್ರ ಲಭ್ಯವಾಗುತ್ತದೆ. ಕೇವಲ ಎರಡು ವರ್ಷಕ್ಕೆ 1800 ಕೋಟಿ ರು ಖೋತವಾಗುತ್ತದೆ. ಹಾಗೇನಾದರೂ ಮುಂದಿನ ಮಾರ್ಚ್ ವರೆಗೆ ಇದೇ ರೀತಿ ಕ್ಯಾತೆಗಳು ಮುಂದುವರಿದರೆ ಕೇಂದ್ರ ತಾನು ನೀಡಬೇಕಾದ ನೆರವು ಎರಡು ಸಾವಿರ ಕೋಟಿ ರುಪಾಯಿಗೆ ಬಂದು ನಿಂತಲ್ಲಿ ಅನುಮಾನವಿಲ್ಲವೆಂದು ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ