- ಕವಲಹಳ್ಳಿ ಜನಾರ್ದನ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು
- ಕಾನನಕಟ್ಟೆ ಬಳಿ ಕೊಚ್ಚಿಹೋದ ಕಾರು: ಈಜಿ ದಡ ಸೇರಿದ ಪ್ರಯಾಣಿಕರು - - - ಕನ್ನಡಪ್ರಭ ವಾರ್ತೆ, ದಾವಣಗೆರೆಸತತ ಐದನೇ ದಿನವೂ ಮಳೆರಾಯನ ಆರ್ಭಟ ಮುಂದುವರಿದಿದ್ದು, ಮೊದಲ ದಿನ ಸಂಜೆ ವೇಳೆ ಸುರಿದಿದ್ದ ಮಳೆರಾಯ ಕಳೆದೆರೆಡು ದಿನಗಳಿಂದ ರಾತ್ರೋರಾತ್ರಿ ಭಾರೀ ಕೃಪೆ ತೋರುವ ಮೂಲಕ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಗರಿಗೆದರಲು ಕಾರಣವಾಗಿದ್ದಾನೆ. ಈ ಮಧ್ಯೆ ನಗರದಲ್ಲಿ ರೆಂಬೆ ಬಿದ್ದು ಕಾರ್‌ವೊಂದು ಜಖಂಗೊಂಡರೆ, ಜಗಳೂರಲ್ಲಿ ಕಾರ್ ಕೊಚ್ಚಿಹೋದ ಘಟನೆಯೂ ನಡೆದಿದೆ.
ನಗರ, ಜಿಲ್ಲಾದ್ಯಂತ ಸೋಮವಾರ, ಮಂಗಳವಾರ ಬೆಳಗಿನ ಜಾವದಿಂದ ಮಧ್ಯಾಹ್ನ, ಸಂಜೆ ಮಳೆ ಆಗುತ್ತಿದೆ. ಬರಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಬಿಸಿಲ ಝಳ, ಬಿಸಿಗಾಳಿಗೆ ಬೆಳೆಗಳು, ತೋಟದ ಬೆಳೆಗಳು ಒಣಗುತ್ತಿದ್ದವು. ಆದರೆ, 5 ದಿನಗಳಿಂದ ಸುರಿದ ಮಳೆಯಿಂದಾಗಿ ಚೇತರಿಸಿಕೊಳ್ಳುತ್ತಿವೆ. ವಾತಾವರಣದಲ್ಲಿ ತಂಪು ಮೂಡಿದೆ.ನಗರ, ಜಿಲ್ಲಾದ್ಯಂತ ಇಡೀ ದಿನ ದಟ್ಟಮೋಡ ಆವರಿಸಿದೆ. ಆಗಾಗ ಸೂರ್ಯನ ದರ್ಶನವಾದರೂ ಕಳೆದೊಂದು ವರ್ಷದಿಂದ ಮಳೆಗಾಗಿ ಚಾತಕ ಪಕ್ಷಿಯಂತೆ ಕಾದಿದ್ದ ಜನರು ಈಗ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದ ಕಡೆಗಳಲ್ಲೆಲ್ಲ ಒಮ್ಮೊಮ್ಮೆ ಜೋರು ಮಳೆ, ಮತ್ತೊಮ್ಮೆ ತುಂತುರು ಮಳೆಯಾಗುವ ಮೂಲಕ ಮಳೆ ನೀರು ಭೂಮಿಗೆ ಇಂಗುವಂತೆ ಮಾಡುತ್ತಿದೆ. ಇದು ಅಂತರ್ಜಲ ಏರಿಕೆಗೂ ಸಹಕಾರವಾಗಿದೆ.
ಕಾರಿನ ಮೇಲೆ ಬಿದ್ದ ಮರ-ಕಂಬ:ದಾವಣಗೆರೆ ನಗರದ ಕೆ.ಆರ್. ರಸ್ತೆಯ ಅಶೋಕ ಚಿತ್ರ ಮಂದಿರ ಹಿಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಹಳೆಯ ಮರವೊಂದರ ದೊಡ್ಡ ಕೊಂಬೆ ತುಂಡಾಗಿ ವಿದ್ಯುತ್ ತಂತಿಗಳ ಸಮೇತ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಹರಪನಹಳ್ಳಿ ತಾಲೂಕು ಕವಲಹಳ್ಳಿಯ ಜನಾರ್ದನ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸಾಕಷ್ಟು ಜಖಂಗೊಂಡಿದೆ.
ಕವಲಹಳ್ಳಿ ಜನಾರ್ದನ ದಾವಣಗೆರೆಯಲ್ಲಿ ಗೊಬ್ಬರ ಅಂಗಡಿ ಹೊಂದಿದ್ದಾರೆ. ಎಂದಿನಂತೆ ಕವಲಹಳ್ಳಿಗೆ ಹೋಗುತ್ತಿದ್ದರು. ತಮ್ಮ ಮುಂದೆ ಹೋಗುತ್ತಿದ್ದ ವಾಹನದ ಮೇಲೆ ಸಣ್ಣ ರೆಂಬೆ ಬಿದ್ದಿದೆ. ಇದನ್ನು ಗಮನಿಸಿದ ಜನಾರ್ದನ ಮುಂದೆ ವಾಹನ ಚಾಲನೆ ಮಾಡುವಷ್ಟರಲ್ಲಿ ದೊಡ್ಡ ಕೊಂಬೆ ಮುರಿದು ಬಿದ್ದು, ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಪಾಲಿಕೆ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಧಾವಿಸಿ, ಮರದ ಕೊಂಬೆ, ವಿದ್ಯುತ್ ಕಂಬ, ತಂತಿಗಳ ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಕಾನನಕಟ್ಟೆ ಬಳಿ ಕೊಚ್ಚಿಹೋದ ಕಾರು:
ಅತ್ತ ಜಗಳೂರು ತಾಲೂಕಿನಲ್ಲಿ ಭಾನುವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಜೋರು ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಅಲ್ಲಿನ ರಾಷ್ಟ್ರೀಯ ಹೆದ್ದಾರಿ-50ರ ಕಾನನಕಟ್ಟೆ ಬಳಿ ಕಾರೊಂದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೀರಿನಲ್ಲಿ ಕಾರು ಕೊಚ್ಚಿಕೊಂಡು ಹೋಗುತ್ತಿದ್ದಂತೆ ಕಾರಿನಲ್ಲಿದ್ದವರು ಡೋರ್‌ಗಳ ಮೂಲಕ ಹೊರಬಂದು ಈಜಿ ದಡ ಸೇರಿದ್ದಾರೆ. ನೀರಿನ ಸೆಳವಿನಲ್ಲಿ ಕಾರು ಸುಮಾರು ದೂರ ಕೊಚ್ಚಿಹೋಗಿದೆ. ಸೋಮವಾರ ಬೆಳಗ್ಗೆ ಮಳೆ ನಿಂತು, ನೀರಿನ ಹರಿವು ಕಡಿಮೆಯಾದ ನಂತರ ಹೊರ ತೆಗೆಯಲಾಗಿದೆ.ಕೆರೆಗಳಿಗೆ ನೀರು:
ಬರಪೀಡಿತ ಜಗಳೂರು ತಾಲೂಕಿನ ಕೆರೆಗಳಿಗೆ ಮಳೆನೀರಿನ ಹರಿವು ಹೆಚ್ಚಾಗಿದೆ. ನೀರನ್ನೇ ಕಾಣದಿಂದ ಕೆರೆಗಳಲ್ಲಿ ಒಂದಿಷ್ಟು ನೀರು ಸಂಗ್ರಹ ಆಗಿರುವುದು ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಹುಚ್ಚವ್ವನಹಳ್ಳಿ ಕೆರೆಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಜಗಳೂರು ಪಟ್ಟಣ, ಕಸಬಾ, ಬಂಗಾರಕ್ಕನ ಗುಡ್ಡ, ಹಿರೇಮಲ್ಲನಹೊಳೆ, ಅಣಬೂರು, ಗೋಗುದ್ದು, ಹನುಮಂತಾಪುರ, ಚಿಕ್ಕಮಲ್ಲನಹಳ್ಳಿ, ಕಟ್ಟಿಗೆಹಳ್ಳಿ, ಅರಿಶಿನಗುಂಡಿ ಸೇರಿದಂತೆ ಅನೇಕ ಕಡೆ ಉತ್ತಮ ಮಳೆಯಾಗಿದೆ. ಅಂತರ್ಜಲ ವೃದ್ಧಿಯಾಗುತ್ತಿದೆ. ಕೆರೆ, ಕಟ್ಟೆಗಳು, ಬಾವಿಗಳಲ್ಲಿ ನೀರು ಕಂಡು ಜನರು ವರುಣನಿಗೆ ನಮಿಸಿದ್ದಾರೆ.- - - ಬಾಕ್ಸ್ ಗರಿಗೆದರಿದ ಕೃಷಿ ಚಟುವಟಿಕೆ: ಬಿತ್ತನೆ ಚುರುಕು ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲಾದ್ಯಂತ ಕೃತ್ತಿಕಾ ಮಳೆಯಿಂದಾಗಿ ಭೂಮಿ ತಣಿದಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸನ್ನದ್ಧರಾಗುತ್ತಿದ್ದಾರೆ.
ಕಳೆದೊಂದು ವರ್ಷದಿಂದ ಬೆಳೆದ ಬೆಳೆ ಕೈಗೆ ಬಾರದೇ, ಭದ್ರಾ ಡ್ಯಾಂನಲ್ಲಿ ನೀರಿದ್ದರೂ ಸಂಕಷ್ಟದ ಸಮಯದಲ್ಲಿ ಕಾಡಾ ಸಮಿತಿ ನೀರು ಕೊಡದಿದ್ದರಿಂದ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯಲ್ಲೂ ರೈತರು, ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಆದರೆ, 5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿದೆ.ವಿಶೇಷವಾಗಿ ರೈತಾಪಿ ಜನರು ಈ ಸಲವಾದರೂ ಉತ್ತಮ ಮಳೆಯಾಗಿ, ಬೆಳೆಯಾಗಿ ತಮ್ಮ ಸಂಕಷ್ಟ ಪರಿಹಾರ ಕಾಣಲಿ ಎಂಬ ನಿರೀಕ್ಷೆಯಲ್ಲಿದ್ದಾರೆ. ತೋಟದ ಬೆಳೆಗಾರರು ಅದರಲ್ಲೂ ವಿಶೇಷವಾಗಿ ಅಡಕೆ, ತೆಂಗು, ಬಾಳೆ, ಕಬ್ಬು ಬೆಳೆಗಾರರು ಬೆಳೆಗಳು ಉಳಿದ ಖುಷಿಯಲ್ಲಿದ್ದಾರೆ.
- - - -21ಕೆಡಿವಿಜಿ1, 2, 3:ದಾವಣಗೆರೆ ಅಶೋಕ ಟಾಕೀಸ್ ಹಿಂಭಾಗದಲ್ಲಿ ದೊಡ್ಡ ಮರದ ರೆಂಬೆ ವಿದ್ಯುತ್ ತಂತಿ, ಕಂಬ ಕಾರಿನ ಮೇಲೆ ಬಿದ್ದಿರುವುದು.