ಮರ ಬಿದ್ದು ಹಲವು ಮನೆಗಳಿಗೆ ಹಾನಿ

KannadaprabhaNewsNetwork | Published : Jul 20, 2024 12:50 AM

ಸಾರಾಂಶ

ಶುಕ್ರವಾರ ಬೆಳಗ್ಗೆಯವರೆಗೆ ತಾಲೂಕಿನಲ್ಲಿ 95.8 ಮಿಮೀ ಮಳೆಯಾಗಿದ್ದು, ಇದುವರೆಗೆ 2909.6 ಮಿಮಿ ಮಳೆಯಾಗಿದೆ. ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿದ್ದರೆ, ಮುರುಡೇಶ್ವರ ಭಾಗದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.

ಭಟ್ಕಳ: ತಾಲೂಕಿನಲ್ಲಿ ಶುಕ್ರವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ.

ಶುಕ್ರವಾರ ಬೆಳಗ್ಗೆಯವರೆಗೆ ತಾಲೂಕಿನಲ್ಲಿ 95.8 ಮಿಮೀ ಮಳೆಯಾಗಿದ್ದು, ಇದುವರೆಗೆ 2909.6 ಮಿಮಿ ಮಳೆಯಾಗಿದೆ. ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿದ್ದರೆ, ಮುರುಡೇಶ್ವರ ಭಾಗದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.

ಮಾವಳ್ಳಿಯ ಮನಾಲ್ ಗಾರ್ಡನ ಬಳಿ ಆನಂದ ಹರಿಕಾಂತ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಮಾವಳ್ಳಿ ಗ್ರಾಮದ ಸೊನಾರಕೇರಿಯಲ್ಲಿ ವೆಂಕಟ್ರಮಣ ತಿಮ್ಮಪ್ಪ ಮೊಗೇರ ಅವರ ಮನೆಯ ಹೆಂಚು ಹಾರಿ ಹೋಗಿದೆ. ಮಾವಳ್ಳಿ ಕೆರೆಕಟ್ಟೆ ನಿವಾಸಿ ಮಾಸ್ತಿ ಗಣಪತಿ ದೇವಾಡಿಗ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕಾಯ್ಕಿಣಿ ನಿವಾಸಿ ಕುಪ್ಪು ಕುಪ್ಪ ನಾಯ್ಕ ಮನೆಯ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಬೈಲೂರಿನ ತೂದಳ್ಳಿ ನಿವಾಸಿ ಗಜಾನನ ನಾಗಪ್ಪ ಮೊಗೇರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹಡೀನ ಗ್ರಾಮದ ದುರ್ಗಪ್ಪ ಈರಪ್ಪ ನಾಯ್ಕ ಮನೆಯೂ ಭಾಗಶಃ ಕುಸಿದಿದೆ. ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಡಿಪಿ ಕಾಲನಿಯಲ್ಲಿ ಸರಸ್ವತಿ ಜೊಶಿ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ.

ಯಲ್ವಡಿಕವೂರಿನ ರಮೇಶ ಮಾಸ್ತಿ ಗೊಂಡ, ಮಾವಳ್ಳಿನಿವಾಸಿ ಶಂಕರ ರಾಮಯ್ಯ ನಾಯ್ಕ, ಹಡೀನ ತಿಲಕ ನಗರದ ನಾಗರಾಜ ರೂಪಸೇನ ಗೋಸಾವಿ, ಮಾವಳ್ಳಿ ಗ್ರಾಮದ ವೆಂಕಟ್ರಮಣ ಸುಬ್ಬಯ್ಯ ನಾಯ್ಕ ಅವರ ಮನೆಯೂ ಮಳೆಯಿಂದ ಭಾಗಶಃ ಕುಸಿದಿದೆ. ಶಿರಾಲಿ ಗ್ರಾಮದ ಬಿಬಿ ಆಯಿಷಾ ಮನೆಯ ಮೇಲೆ ಹಲಸಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಶಿರಾಲಿ ನಿವಾಸಿ ಮಾಸ್ತಮ್ಮ ಈರಪ್ಪ ನಾಯ್ಕ ಮನೆಯ ಮೇಲೆ ಅಡಕೆ ಮರ ಬಿದ್ದಿದೆ.

ಮುಟ್ಟಳ್ಳಿಯ ಕೃಷ್ಣ ಗೋವಿಂದ ನಾಯ್ಕ ಅವರ ಮನೆಯ ಕಚ್ಚಾಗೋಡೆಗಳು ಮಳೆಗೆ ಕುಸಿದು ಸಂಪೂರ್ಣ ಹಾನಿಯಾಗಿದೆ. ಪಡುಶಿರಾಲಿಯಲ್ಲಿ ಗುರುವಾರ ರಾತ್ರಿ ಜೋರಾದ ಮಳೆ ಗಾಳಿಯ ಸಂದರ್ಭದಲ್ಲಿ ಊಟ ಮಾಡಿ ಕೈತೊಳೆಯಲು ಮನೆಯ ಹೊರಗಡೆ ಹೋದ ಆದ್ಯ ಮಂಜುನಾಥ ನಾಯ್ಕ ಎನ್ನುವ 9 ವರ್ಷದ ಬಾಲಕನ ಮೇಲೆ ತೆಂಗಿನ ಕಾಯಿ ಬಿದ್ದು, ತೀವ್ರಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ.

ಹಾನಿ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರೀ ಮಳೆಗೆ ಹೊಳೆ, ಹಳ್ಳಗಳು ತುಂಬಿ ತುಳುಕುತ್ತಿದ್ದು, ಶರಾಬಿ ಹೊಳೆಯ ನೀರು ರಸ್ತೆಯವರೆಗೂ ಬಂದಿತ್ತು.

Share this article