ವಾಣಿಜ್ಯನಗರಿಯಲ್ಲಿ ಎರಡು ದಿನ ಹಲಸಿನ ಘಮಲು

KannadaprabhaNewsNetwork | Published : Jul 6, 2024 12:49 AM

ಸಾರಾಂಶ

ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಹಲಸನ್ನು ಬಯಲು ಸೀಮೆಯಲ್ಲೂ ಬೆಳೆಸಲು ಉತ್ತೇಜಿಸುವ ಉದ್ದೇಶದೊಂದಿಗೆ ಸಹಜ ಸಮೃದ್ಧ ಸಂಸ್ಥೆಯಿಂದ ಹಲವು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ, ಮೈಸೂರು, ತಿಪಟೂರಿನಲ್ಲಿ ಹಲಸಿನ ಹಬ್ಬ ಹಮ್ಮಿಕೊಳ್ಳಲಾಗುತ್ತಿದೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಾಮಾನ್ಯವಾಗಿ ಹಲಸು ಕಂಡರೆ, ಅದರ ಸುವಾಸನೆ ಬಂದರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತೆ. ಅದೇ ಒಂದೆಡೆ 25ಕ್ಕೂ ಹೆಚ್ಚು ತಳಿಯ ಹಲಸುಗಳು ಬಂದರೆ ಹೇಗಿರಬೇಡ?

ಹೌದು! ಸಹಜ ಸಮೃದ್ಧ ಸಂಸ್ಥೆಯಿಂದ ಇಲ್ಲಿನ ಮೂರುಸಾವಿರ ಮಠದ ಮೂಜಗಂ ಸಭಾಂಗಣದಲ್ಲಿ ಜು. 6 ಮತ್ತು 7ರಂದು ಸಾವಯವ ಮತ್ತು ಹಲಸಿನ ಹಬ್ಬ ಹಮ್ಮಿಕೊಂಡಿದೆ.

ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಹಲಸನ್ನು ಬಯಲು ಸೀಮೆಯಲ್ಲೂ ಬೆಳೆಸಲು ಉತ್ತೇಜಿಸುವ ಉದ್ದೇಶದೊಂದಿಗೆ ಸಹಜ ಸಮೃದ್ಧ ಸಂಸ್ಥೆಯಿಂದ ಹಲವು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ, ಮೈಸೂರು, ತಿಪಟೂರಿನಲ್ಲಿ ಹಲಸಿನ ಹಬ್ಬ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಬೆಂಗಳೂರಿನಲ್ಲಿ ಹಲಸಿನ ಹಬ್ಬ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ.

ಖಾದ್ಯಗಳ ಮಾರಾಟಕ್ಕೂ ವ್ಯವಸ್ಥೆ

ಮೇಳದಲ್ಲಿ ಹಲಸಿನ ಹಣ್ಣುಗಳ ಪ್ರದರ್ಶನದೊಂದಿಗೆ ಇದರಿಂದ ತಯಾರಿಸಿದ ವಿವಿಧ ಖಾದ್ಯಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲಸಿನಿಂದಲೇ ತಯಾರಿಸಿ ಹಪ್ಪಳ, ಚಿಪ್ಸ್‌, ಸಿಹಿಕಡಬು, ಚಾಕೋಲೇಟ್, ಪಾಯಸ, ಹಲಸಿನ ಹಲ್ವಾ, ಹಲಸಿನ ಹಣ್ಣಿನ ದೋಸೆ, ಹಲಸಿನ ಹೋಳಿಗೆ, ಪಲಾವ್, ಹಲಸಿನ ಬೀಜದಿಂದ ತಯಾರಿಸಿದ ವಡೆ, ಬಿರಿಯಾನಿ, ಹಲಸಿನ ಬೋಂಡಾ, ಹಲಸಿನ ಕೇಕ್, ಪಕೋಡಾ, ಹಲಸಿನ ಐಸ್‌ಕ್ರೀಂ ಸೇರಿದಂತೆ 50ಕ್ಕೂ ಹೆಚ್ಚು ಬಗೆಯ ಬಗೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಇವುಗಳಿಗಾಗಿಯೇ 30ಕ್ಕೂ ಅಧಿಕ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಕೆಂಪು ಹಲಸು

ರಾಷ್ಟ್ರೀಯ ಮನ್ನಣೆ ಗಳಿಸಿರುವ ಗಾಢ ಕೆಂಪು ಬಣ್ಣದ "ಸಿದ್ದು ಹಲಸು " ಗಿಡಗಳು ಆಸಕ್ತರಿಗೆ ಲಭ್ಯವಾಗಲಿವೆ. ಇದರ ಜತೆಗೆ ಭೈರಚಂದ್ರ, ಮೂರು ವರ್ಷಗಳಿಗೊಮ್ಮೆ ಫಲನೀಡುವ ವಿಯಟ್ನಾಂ, ಆಮ್ರಪಲ್ಲಿ, ಪ್ರಕಾಶ್, ಲಾಲ್‌ಭಾಗ್ ಮಧುರ, ಆಂಧ್ರ ರೆಡ್, ಚಂದ್ರ ಹಲಸು, ರುದ್ರಾಕ್ಷಿ ಹಲಸಿನ ಗಿಡಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ.

ರೈತ ಗುಂಪೊಂದು ಮೇಳದಲ್ಲಿ ಹಲಸಿನ ಹಣ್ಣು ಕತ್ತರಿಸಿ, ತೊಳೆಗಳನ್ನು ಬಿಡಿಸಿ ಗ್ರಾಹಕರಿಗೆ ಕೊಡಲಿದೆ. ತಿಪಟೂರಿನ ರೈತರ ಗುಂಪು, ಹಲಸಿನ ಗರಿಗರಿ ದೋಸೆಯನ್ನು ಸ್ಥಳದಲ್ಲೇ ತಯಾರಿಸಿ ಉಣಬಡಿಸಲಿದೆ. ಜತೆಯಲ್ಲೇ ಹಲಸಿನ ಬಜ್ಜಿ, ಬೋಂಡಾ ಸವಿಯುವ ಅವಕಾಶ ಕಲ್ಪಿಸಿರುವುದು ಮತ್ತೊಂದು ವಿಶೇಷ.

ಹಲಸಿನ ತಿನಿಸುಗಳು:

ಹಲಸಿನಿಂದ ತಯಾರಿಸುವ ಖಾದ್ಯಗಳಾದ ಚಿಪ್ಸ್, ಪಾಯಸ, ಹಲಸಿನ ಹಲ್ವ, ಹಲಸಿನ ಹಪ್ಪಳ, ಹಣ್ಣಿನ ದೋಸೆ, ಸಿಹಿಕಡುಬು, ಹಲಸಿನ ಹೋಳಿಗೆ, ಪಲಾವ್, ಹಲಸಿನ ಬೀಜಗಳ ವಡೆ, ಬಿರಿಯಾನಿ, ಹಲಸಿನ ಬೋಂಡ, ಹಲಸಿನ ಕೇಕ್, ಪಕೋಡ, ಹಲಸು ಐಸ್ ಕ್ರೀಂ ಇತ್ಯಾದಿ ವಿಶೇಷ ಖಾದ್ಯಗಳು ಈ ಬಾರಿಯ "ಹಲಸಿನ ಹಬ್ಬ "ದಲ್ಲಿ ದೊರೆಯಲಿವೆ. ಜತೆಗೆ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಒಟ್ಟು ಎರಡು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಹಲಸಿನ ಘಮಲು ಹೆಚ್ಚುವುದಂತೂ ಸುಳ್ಳಲ್ಲ.20ಕ್ಕೂ ಹೆಚ್ಚು ಹಲಸಿನ ತಳಿಗಳ ಪ್ರದರ್ಶನ:

ಶನಿವಾರ ಮತ್ತು ಭಾನುವಾರ ನಡೆಯುವ ಹಲಸಿನ ಹಬ್ಬದಲ್ಲಿ 20ಕ್ಕೂ ಅಧಿಕ ತಳಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ. ತುಮಕೂರಿನ ವಿಶಿಷ್ಟ ಶಂಕರ ಮತ್ತು ಸಿದ್ಧು ಕೆಂಪು ಹಲಸಿನೊಂದಿಗೆ ತೆಳು ಹಳದಿಯ ಹಲಸು, ಬಿಳಿ ಹಲಸು, ಹೆಬ್ಬಲಸು, ರುದ್ರಾಕ್ಷಿ ಹಲಸು ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ. ಇದರೊಂದಿಗೆ ದುಂಡಹಲಸು, ಸಖರಾಯಪಟ್ಟಣದ ಹಲಸು, ಕಲಕಟ್ಟಿ ಹಲಸು, ಮೂಡಗೆ ಹಲಸು, ಸ್ವರ್ಣಹಲಸು, ಉದ್ದಲಸು, ಲಕ್ಷ್ಮೇಶ್ವರ ಹಲಸು, ಭದ್ರಾಪುರ ಹಲಸು, ಪುಟ್ಟಹಲಸು, ಮುಳ್ಳಹಲಸು, ಲಾಲಭಾಗ ಮಧುರ ಹಲಸು, ಸರ್ವಋತು ಹಲಸಗಳು ಮೇಳದಲ್ಲಿ ಕಾಣಸಿಗಲಿವೆ.ಉತ್ತೇಜಿಸಲು ಮೇಳ

ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಹಲಸನ್ನು ಬಯಲುಸೀಮೆಯಲ್ಲೂ ಪರಿಚಯಿಸಿ ಬೆಳೆಯಲು ಉತ್ತೇಜಿಸುವ ಸಲುವಾಗಿ ಈ ಹಲಸಿನ ಹಬ್ಬ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಜನತೆ, ರೈತರು ಮೇಳದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.ಶಾಂತಕುಮಾರ, ಸಹಜ ಸಮೃದ್ಧ ಸಂಸ್ಥೆಯ ಸಂಯೋಜಕ

Share this article