)
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಳಗಿನ ಅವಧಿಯಲ್ಲಿ ಗುಂಜೂರು ರಸ್ತೆಯಲ್ಲಿ ಕಿ.ಮೀ ದೂರದವರೆಗಿನ ಟ್ರಾಫಿಕ್‌ನಲ್ಲಿ ನಿಂತಿರುವ ಹತ್ತಾರು ಶಾಲಾ ವಾಹನಗಳು ಹಾಗೂ ಮತ್ತಿತರ ವಾಹನಗಳ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖಾಸಗಿ ಕಂಪನಿ ಸಹ ಸಂಸ್ಥಾಪಕ ನಿತೀಶ್ ರೆಡ್ಡಿ, ವೈಟ್‌ಫೀಲ್ಡ್‌ನ ಮಕ್ಕಳು ಪ್ರತಿನಿತ್ಯ ಎರಡು ತಾಸು ಸಮಯವನ್ನು ವರ್ತೂರು ರಸ್ತೆಯಲ್ಲಿ ಕಳೆಯುತ್ತಿದ್ದಾರೆ. ವೈಟ್‌ಫೀಲ್ಡ್‌ಗೆ ಸೂಕ್ತ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
ಹದಗೆಟ್ಟ ರಸ್ತೆ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಜೊತೆಗೆ ನಾಗರಿಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡುತ್ತಿರುವುದು ಕೂಡ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ ಎಂದು ಅನೇಕರು ದೂರಿದ್ದಾರೆ.ವರ್ತೂರಿನಲ್ಲಿ ಎಲ್ಲೆಂದರಲ್ಲೇ ಅಪಾರ್ಟ್‌ಮೆಂಟ್, ವಿಲ್ಲಾಗಳು ತಲೆ ಎತ್ತುತ್ತಿವೆ. ಕಟ್ಟಡಗಳ ಎತ್ತರಕ್ಕೆ ತಕ್ಕಂತೆ ಸೂಕ್ತ ರಸ್ತೆಗಳು ಇಲ್ಲದ ಕಡೆ ಆಸ್ತಿಗಳನ್ನು ಖರೀದಿಸಿರುವ ನಾಗರಿಕರು ಈಗ ಟ್ರಾಫಿಕ್ ಸಮಸ್ಯೆ ಎಂದು ದೂರುತ್ತಿದ್ದಾರೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಭಾರಿ ವಾಹನಗಳು ಟ್ರಾಫಿಕ್ ಜಾಮ್‌ಗೆ ಕಾರಣವಾಗುವ ಜೊತೆಗೆ ರಸ್ತೆಗಳನ್ನು ಹಾಳು ಮಾಡುತ್ತಿವೆ. ಬರೀ ಸರ್ಕಾರ, ಜಿಬಿಎ ಮಾತ್ರವಲ್ಲ ನಾಗರಿಕರು ಕೂಡ ಈ ಸಮಸ್ಯೆಗಳಿಗೆ ಹೊಣೆ ಎಂದು ಬ್ರಯಾನ್ ಎಂಬುವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿಮ್ಮ ಮನೆ, ಶಾಲೆ ಮತ್ತು ಕಚೇರಿ 5 ಕಿ.ಮೀ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ಇದೇ ಜನ್ಮದಲ್ಲಿ ನೀವು ನರಕವನ್ನು ಅನುಭವಿಸಬಹುದು. ಒಂದು ವೇಳೆ ರಸ್ತೆ ಸರಿಯಿಲ್ಲದಿದ್ದರಂತೂ 2 ಕಿ.ಮೀ ಕ್ರಮಿಸುವುದು ಕೂಡ ಯಾತನೆಮಯವಾಗುತ್ತದೆ ಎಂದು ಐಎಫ್‌ಎಸ್ ಅಧಿಕಾರಿ ದೀಪಿಕಾ ಬಜಪೈ ‘ಎಕ್ಸ್’ನಲ್ಲಿ ಕಮೆಂಟ್ ಮಾಡಿದ್ದಾರೆ.