ಕಾರವಾರ: ಜಾತ್ರೆ ಎಂದರೆ ಹೋಮ, ಹವನ, ಬಲಿ, ಪಲ್ಲಕ್ಕಿ ಉತ್ಸವ, ರಥೋತ್ಸವ ಸಾಮಾನ್ಯವಾಗಿ ಕಾಣಸಿಗುತ್ತದೆ. ಆದರೆ ಇಲ್ಲಿನ ಜಾತ್ರೆಯಲ್ಲಿ ಗಂಡು ಮಕ್ಕಳ ಹೊಕ್ಕಳಿಗೆ ಸೂಚಿ-ನೂಲು ಪೋಣಿಸುವುದು, ಹೆಣ್ಣು ಮಕ್ಕಳು ದೀವಜ್ (ದೀಪ) ಹೊತ್ತು ಸಾಗುವುದು ವಿಶೇಷವಾಗಿದೆ.
ಭಾನುವಾರ ನಡೆದ ತಾಲೂಕಿನ ಮಾಜಾಳಿಯ ಮಾರ್ಕೆಪೂನವ್ ಜಾತ್ರೆಯಂದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ವಿಶೇಷವಾಗಿದೆ. ಮಾಜಾಳಿ ಗ್ರಾಮದ ಧಾಡ್ ದೇವರ ದೇವಸ್ಥಾನದ ಬಳಿ ನಡೆಯುವ ಈ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆ ಸಲ್ಲಿಸಿದರು. ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಲು ಇದರಿಂದ ಸಹಾಯವಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ವಿವಾಹಕ್ಕೂ ಪೂರ್ವ ಯುವಕರು ಮತ್ತು ಮಕ್ಕಳು ಸೂಜಿ ಚುಚ್ಚಿಸಿಕೊಳ್ಳುವುದು ಜಾತ್ರೆಯಲ್ಲಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.ಧಾಡ್ ದೇವಸ್ಥಾನದಿಂದ ೧ಕಿಮೀ ದೂರವಿರುವ ದೇವತಿ ದೇವಿಯ ದೇವಸ್ಥಾನದವರೆಗೆ ಕನಕಾಂಬರ ಹೂವಿನಿಂದ ಸಿಂಗಾರಗೊಂಡ ಬಂಡಿಯನ್ನು ಸ್ಥಳೀಯ ಯುವಕರು ಎಳೆಯುತ್ತಾರೆ. ಬಂಡಿಯೊಂದಿಗೆ, ಹರಕೆ ಹೊತ್ತವರು, ಸೂಜಿ-ನೂಲು ಪೋಣಿಸಿಕೊಂಡವರು ಆ ದೇವಸ್ಥಾನದ ಬಳಿ ತೆರಳಿ ಅಲ್ಲಿ ದಾರ ತೆಗೆಸಿಕೊಂಡ ಬಳಿಕ ಅವರ ಹರಕೆ ತೀರಿದಂತಾಗುತ್ತದೆ. ಗ್ರಾಮದ ಯುವತಿಯರು, ಸೊಸೆಯಾಗಿ ಗ್ರಾಮಕ್ಕೆ ಬಂದವರು ಹಾಗೂ ಹರಕೆ ಹೊತ್ತುಕೊಂಡ ಮಹಿಳೆಯರು ದೀಪ ಸೇವೆ ನೀಡುತ್ತಾರೆ. ತಮ್ಮ ತಲೆಯ ಮೇಲೆ ೫ ಬತ್ತಿಯಿರುವ ದೀಪ ಹೊತ್ತುಕೊಂಡು ದಾಡ್ ದೇವಸ್ಥಾನದಿಂದ ದೇವತಿದೇವಿ ದೇವಸ್ಥಾನದವರೆಗೆ ಬಿಸಿಲಿನಲ್ಲೇ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಬಳಿಕ ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪದಿಂದ ಆರತಿ ಮಾಡಿ, ದೇವರಿಗೆ ನಮಸ್ಕರಿಸಿ ದೀಪಗಳನ್ನು ಅಲ್ಲಿಯೇ ಇಟ್ಟು ಮರಳುತ್ತಾರೆ. ಪುರಾತನ ಕಾಲದಿಂದ ನಡೆದು ಬರುತ್ತಿರುವ ಈ ಜಾತ್ರೆಗೆ ಸ್ಥಳೀಯರೊಂದೇ ಅಲ್ಲದೇ ಗೋವಾ, ಮಹಾರಾಷ್ಟ್ರ, ಮುಂಬೈ ಒಳಗೊಂಡು ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ.
ಮಾರ್ಕೆಪೂನವ್ ಜಾತ್ರೆ ನಿಮಿತ್ತ ಹೊಸದಾಗಿ ವಿವಾಹವಾಗಿ ಬಂದ ಸೊಸೆಯರು, ಊರಿನ ಹೆಣ್ಣುಮಕ್ಕಳು ತಲೆಯ ಮೇಲೆ ೫ ಬತ್ತಿಯಿರುವ ದೀಪ ಹೊತ್ತುಕೊಂಡು ದಾಡ್ ದೇವಸ್ಥಾನದಿಂದ ದೇವತಿದೇವಿ ದೇವಸ್ಥಾನದವರೆಗೆ ತೆರಳಿ, ಅಲ್ಲಿನ ದೇವತೆಗೆ ನಾವು ಹೊತ್ತು ತಂದ ದೀಪದಾರತಿ ಮಾಡಿ ಭಕ್ತಿಯಿಂದ ನಮಸ್ಕರಿಸಿ ದೀಪಗಳನ್ನು ಅಲ್ಲಿಯೇ ಇಟ್ಟು ಮರಳುತ್ತೇವೆ. ಇದರಿಂದ ನಮಗೆ, ಕುಟುಂಬಕ್ಕೆ ಒಳ್ಳೆಯದ್ದಾಗುತ್ತದೆ ಎನ್ನುವ ನಂಬಿಕೆಯಿದೆ ಎಂದು ಭಕ್ತೆ ಶುಭಾಂಗಿ ಪವಾರ ಹೇಳಿದರು.