ವಸಂತಕುಮಾರ್ ಕತಗಾಲ
ಕಾರವಾರ: ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ವಿರೋಧಿಸಲು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಒಕ್ಕೊರಲ ನಿರ್ಧಾರ ಮಾಡಿದೆ.ಸ್ವರ್ಣವಲ್ಲಿ ಮಠದಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ನೇತೃತ್ವದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವಿಶೇಷ ಸಮಾಲೋಚನಾ ಸಭೆ ನಡೆದು ಯೋಜನೆಯ ವಿರುದ್ಧ ಜನವರಿಯಲ್ಲಿ ಬೇಡ್ತಿ ವರದಾ ನದಿ ಜೋಡಣೆ ವಿರೋಧಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ. ಹೋರಾಟಕ್ಕೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ಕೈಗೊಂಡಿದೆ.
ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಪಶ್ಚಿಮ ಘಟ್ಟಕ್ಕೆ ಮಾರಕ. ಬೇಡ್ತಿ ನದಿ ಕಣಿವೆಯ ಹಾಗೂ ರೈತರು, ವನವಾಸಿಗಳ ವಿನಾಶಕ್ಕೆ ಕಾರಣವಾಗಲಿದೆ. ಬೇಡ್ತಿಯಲ್ಲಿ ಬೇಸಿಗೆಯಲ್ಲಿ ನೀರೇ ಇರುವುದಿಲ್ಲ. ಬೇಡ್ತಿ ಕಣಿವೆಯ 1.5 ಲಕ್ಷ ಜನರಿಗೆ, ರೈತರಿಗೆ ನೀರುಣಿಸಲು ನೀರು ಸಾಕಾಗುವುದಿಲ್ಲ. ಸರ್ಕಾರ ಬೇಡ್ತಿ-ವರದಾ ಯೋಜನೆಯ ತಯಾರಿ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒಕ್ಕೊರಲ ಆಗ್ರಹ ಮಾಡಲಾಗಿದೆ.ಬೇಡ್ತಿ-ವರದಾ ಯೋಜನೆ ವಿರೋಧಿ ಹೋರಾಟ ಸಂಘಟನೆ ಬಲ ಪಡಿಸಲು ನಿರ್ಧರಿಸಲಾಗಿದೆ. ಸಂಸದರು, ಶಾಸಕರು ಈ ಬಗ್ಗೆ ನಿಯೋಗದಲ್ಲಿ ಹೊಗಿ ರಾಜ್ಯ-ಕೇಂದ್ರ ಸರ್ಕಾರಕ್ಕೆ ಅಹವಾಲು ಸಲ್ಲಿಸಿ ಬೇಡ್ತಿ-ವರದಾ ಯೊಜನೆ ಕೈ ಬಿಡುವಂತೆ ಮನದಟ್ಟು ಮಾಡಬೇಕು ಎಂದು ಮನವಿ ಮಾಡಲಾಗಿದೆ.ಅಕ್ಟೋಬರ್ ನಲ್ಲಿ ಪಟ್ಟಣದ ಹೊಳೆ, ಸಹಸ್ರಲಿಂಗ ಹಾಗೂ ಬೇಡ್ತಿ ನದಿ ಸೇತುವೆಯ ಬಳಿಯ ಸುರಮನೆ ಈ ಮೂರು ಸ್ಥಳಗಳಿಗೆ ಬೇಡ್ತಿ ಸಮಿತಿಯ ಕಾರ್ಯಕರ್ತರು-ಸ್ಥಳೀಯ ಜನತೆ ಭೇಟಿ ನೀಡಿ ಸಭೆ ನಡೆಸಬೇಕು. ನವೆಂಬರ್‌ನಲ್ಲಿ ಶಿರಸಿಯಲ್ಲಿ ವಿಜ್ಞಾನಿಗಳ ಜೊತೆ ಪಶ್ಚಿಮಘಟ್ಟದ ವಿನಾಶಕಾರಿ ಬೃಹತ್ ಯೋಜನೆಗಳು ವಿಶೇಷವಾಗಿ ನದಿ ತಿರುವು ಯೋಜನೆಗಳ ಬಗ್ಗೆ ವಿಚಾರ ಸಂಕಿರಣ ನಡೆಸಬೇಕು.ಜನವರಿ 2026 ರಲ್ಲಿ ಬೃಹತ್ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ವಿರೋಧಿ ಜನ ಸಮಾವೇಶ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ.
ಶಿರಸಿ ಯಲ್ಲಾಪುರ ತಾಲೂಕುಗಳ ರೈತ ಸಹಕಾರಿ ಸಂಘಗಳ ವಾರ್ಷಿಕ ಸಭೆಯಲ್ಲಿ ಹಾಗೂ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಬೇಡ್ತಿ ವರದಾ ಯೋಜನೆ ರದ್ದು ಮಾಡಿ ಎಂಬ ನಿರ್ಣಯ ಸ್ವೀಕರಿಸಬೇಕು ಎಂದು ಮನವಿ ಮಾಡಲಾಯಿತು.ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯನ್ನು ಪುನಾರಚನೆ ಮಾಡಲು ಸಭೆ ನಿರ್ಧರಿಸಿತು. ಅನಂತ ಹೆಗಡೆ ಅಶೀಸರ ಅವರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿ ಮಾಡಲಾಗಿದೆ. 30 ಜನರ ಸಮೀತಿಯನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅನಂತ ಅಶೀಸರ, ಈವರೆಗೆ ನಡೆದ ಬೇಡ್ತಿ-ವರದಾ ಯೋಜನೆ ವಿರುಧ್ದದ ಹೋರಾಟದ ವಿವರ ನೀಡಿದರು. “ಸರ್ಕಾರದಲ್ಲಿ ಬೇಡ್ತಿ-ವರದಾ ಯೋಜನೆ ಡಿ.ಪಿ.ಆರ್ ತಯಾರಿ ಹಂತದಲ್ಲಿ ಇದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ” ಎಂದು ತಿಳಿಸಿದರು.ವಿಜ್ಞಾನಿಗಳಾದ ಡಾ.ಕೇಶವ ಕೊರ್ಸೆ, ಡಾ. ಬಾಲಚಂದ್ರ ಸಾಯಿಮನೆ, ಡಾ. ನರಸಿಂಹ ವಾನಳ್ಳಿ ಬೇಡ್ತಿ-ವರದಾ ಯೋಜನೆ ಪರಿಸರ ದುಶ್ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದರು. ಸಮಾಲೋಚನೆಯಲ್ಲಿ ಡಾ. ವೆಂಕಟೇಶ ನಾಯ್ಕ, ಸದಾನಂದ ಭಟ್ಟ, ರಮಾಕಾಂತ ಮಂಡೆಮನೆ, ಹರಿಪ್ರಕಾಶ ಕೋಣೆಮನೆ, ಶ್ರೀಪಾದ ಶಿರನಾಲ, ಉಮೇಶ ಭಾಗ್ವತ್, ವಿ ಆರ್ ಹೆಗಡೆ ಮಣ್ಮನೆ, ನರಸಿಂಹ ಸಾತೊಡ್ಡಿ, ಅನಂತಮೂರ್ತಿ ಹೆಗಡೆ, ಡಾ. ಜಿ.ವಿ ಹೆಗಡೆ, ಗಣಪತಿ ಹೆಗಡೆ ಮುರೇಗಾರ, ಗಣಪತಿ ಬಿಸಲಕೊಪ್ಪ, ನಾರಾಯಣ ಗಡಿಕೈ, ಆರ್.ಎಸ್ ಹೆಗಡೆ ಭೈರುಂಬೆ, ನರಸಿಂಹ ಭಟ್ಟ ಸಾಲ್ಕಣಿ, ಶಂಭು ಪಟಗಾರ, ವಿಶ್ವನಾಥ ಗೌಡ, ಸುರೇಶ ಹಕ್ಕಿಮನೆ, ಎನ್.ಜಿ.ಭಟ್ರಕೇರಿ ಮತ್ತಿತರರು ಪಾಲ್ಗೊಂಡಿದ್ದರು.
ಅನಂತ ಭಟ್ಟ ಹುಳಗೋಳ ನಿರ್ಣಯ ಮಂಡಿಸಿದರು. ವಿ.ಎನ್.ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಯಲ್ಲಾಪುರ ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ವಂದಿಸಿದರು.ಸಂಘಟಿತ ಹೋರಾಟ ಅಗತ್ಯ: “ಬಹುಮಹತ್ವ ಪಡೆದ ಬೇಡ್ತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ವರ್ಣವಲ್ಲಿ ಶ್ರೀಗಳು, 1992ರ ಬೇಡ್ತಿ ಪಾದ ಯಾತ್ರೆಯಿಂದ ಆರಂಭಿಸಿ ಇಲ್ಲಿಯವರೆಗೆ ನಿರಂತರ ಬೇಡ್ತಿ ಅಘನಾಶಿನಿ ಸಂರಕ್ಷಣಾ ಜನಾಂದೋಲನ ನಡೆಸಿದ್ದೇವೆ. ಇದೀಗ ಬೇಡ್ತಿ ವರದಾ ಯೋಜನೆ ಕುರಿತು ಪರಿಸರ ತಜ್ಞರ ಸ್ವತಂತ್ರ ವರದಿ ಪ್ರಕಟವಾಗಿದೆ. ವೈಜ್ಞಾನಿಕ ಆಧಾರಗಳು, ಕಾಯ್ದೆಗಳ ಬೆಂಬಲ ಹಾಗೂ ಅಂಹಿಸಾತ್ಮಕ ಮಾರ್ಗದಲ್ಲಿ ಬೇಡ್ತಿ-ವರದಾ ಯೋಜನೆ ತಡೆಯಲು ಸಂಘಟಿತ ಹೋರಾಟ ನಡೆಸಬೇಕು” ಎಂದು ಕರೆ ನೀಡಿದರು.