ಬ್ರಿಟಿಷರು ಸಮಾಜದ ಅಂಕು-ಡೊಂಕು ಪ್ರದರ್ಶಿಸಲು ಹೋಳಿ ಸಂದರ್ಭ ಅನುಮತಿ ನೀಡಿದ್ದರಂತೆ
ಕನ್ನಡಪ್ರಭ ವಾರ್ತೆ ಅಂಕೋಲಾ
ವಿಡಂಬನಾ ಸ್ವಾತಂತ್ರ್ಯಕ್ಕೂ ಹಬ್ಬವೊಂದಿದೆ ಎಂದರೆ ನೀವು ನಂಬುತ್ತೀರಾ? ಹೌದು, ಸಮಾಜದ ಅಂಕು-ಡೊಂಕುಗಳನ್ನು ಸಾಂಪ್ರದಾಯಿಕ ಜಾನಪದ ಕಲೆಯ ಮೂಲಕ ಬಿಂಬಿಸುವ ವಿಶಿಷ್ಟ ಹೋಳಿ ಹಬ್ಬ ಕಳೆದ ನಾಲ್ಕು ಶತಮಾನಗಳಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಾಣಬಹುದಾಗಿದೆ.ವೇಷಗಳ ಮೂಲಕ ಜಾಗೃತಿ ಈ ಒಂದು ಪರಂಪರೆ ಇಂದಿಗೂ ಯಾವುದೇ ಅಡೆತಡೆ ಇಲ್ಲದೇ ನಡೆದುಕೊಂಡು ಬಂದಿದೆ. ಹಾಗಾಗಿ ಸಮಕಾಲೀನ ಸಂದರ್ಭದಲ್ಲಿ ಸಮಾಜದಲ್ಲಾದ ಲೋಪದೋಷ, ರಾಜಕೀಯದಲ್ಲಾದ ಅಹಸ್ಯ ವಿದ್ಯಮಾನವನ್ನು ತಮ್ಮ ವೇಷಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಅಂಕೋಲಾದಲ್ಲಿ ಹೋಳಿ ಬಂತೆಂದರೆ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ನಡುಕ ಉಂಟಾಗುತ್ತದೆ. ಏಕೆಂದರೆ 15 ಸಾವಿರಕ್ಕೂ ಹೆಚ್ಚಿನ ಜನತೆಯ ಮುಂದೆ ತಮ್ಮ ಭ್ರಷ್ಟತೆಯನ್ನು ಹಾಲಕ್ಕಿಗಳು ಹಗರಣಗಳ ಮೂಲಕ ಎಲ್ಲಿ ಪ್ರದರ್ಶಿಸಿ ಮಾನ ಕಳೆಯುತ್ತಾರೋ ಎಂಬ ಅಂಜಿಕೆಯಲ್ಲಿ ಇರುತ್ತಾರೆ.
30ಕ್ಕೂ ಹೆಚ್ಚು ವಾಹನ ಹಾಗೂ ಕಾಲ್ನಡಿಗೆಯಲ್ಲಿ ಈ ವಿಡಂಬನಾ ರೂಪಕಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರತಿ ವರ್ಷ ಇಲ್ಲಿನ ಜನರಲ್ಲಿ ಕುತೂಹಲವಿರುತ್ತದೆ. ಏಕೆಂದರೆ ಈ ವರ್ಷ ಯಾರ ಭಾನಗಡಿ ಹೊರ ಬೀಳುತ್ತದೆಯೋ ಎಂಬ ಕುತೂಹಲದಲ್ಲಿ ಸಹಸ್ರಾರು ಜನರು ಸೇರುತ್ತಾರೆ. ಪ್ರಸಕ್ತ ವರ್ಷದ ಪ್ರಸ್ತುತ ಸಂದರ್ಭಗಳ ವಿಡಂಬನೆ ಇಲ್ಲಿ ಪ್ರದರ್ಶನವಾಗುತ್ತದೆ. ರಾಜಕಾರಣಿಗಳ ಸೋಗಲಾಡಿತನ ಹಾಲಕ್ಕಿಗಳ ಹಗರಣದಲ್ಲಿ ಬಣ್ಣ ಪಡೆಯುತ್ತದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಷ್ಟ್ರ ರಾಜಕಾರಣದ ವರೆಗೂ ನಡೆದ ಕರಾಳ ಬೆಳವಣಿಗೆ ವರೆಗೂ ತಮ್ಮ ಪ್ರದರ್ಶನದಲ್ಲಿ ರಂಗು ತರುತ್ತಾರೆ.ಗುಪ್ತ ಸಿದ್ಧತೆ:
ವಿಡಂಬನಾ ಹಗರಣಗಳ ಪ್ರದರ್ಶನಗಳಿಗೆ ಸಾಕಷ್ಟು ತಯಾರಿಗಳನ್ನು ಹಾಲಕ್ಕಿಗಳು ಮಾಡಿರುತ್ತಾರೆ. ಹಬ್ಬದಂದೂ ಹಗರಣಗಳ ವೇಷಗಳು ಹೊರ ಬೀಳುವವರೆಗೂ ಇದರ ಗೌಪ್ಯತೆ ಕಾಪಾಡಿಕೊಂಡಿರುತ್ತಾರೆ. ಈ ಹಗರಣ ಬಯಲು ಮಾಡಲು ಕೇವಲ ಬೆಳಂಬಾರ ಹಾಲಕ್ಕಿ ಸಮಾಜದವರಿಗೆ ಮಾತ್ರ ಅವಕಾಶವಿರುತ್ತದೆ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುಗ್ಗಿ:
ಬೆಳಂಬಾರದ ಹಾಲಕ್ಕಿ ಸಮುದಾಯದ ಸುಗ್ಗಿ ನೂರಾರು ವರ್ಷಗಳಿಂದ ಐತಿಹಾಸಿಕವಾಗಿ ನಡೆದುಕೊಂಡು ಬಂದಿದೆ. ಈ ಜನಪದ ಕಲೆಯನ್ನು ಕಂಡು ಬ್ರಿಟಿಷ್ ಹಿರಿಯ ಅಧಿಕಾರಿಯೊಬ್ಬರು ಹರ್ಷಿತರಾಗಿ ತಾಮ್ರ ಫಲಕ ನೀಡಿದ್ದು ಈಗ ಇತಿಹಾಸ. ಆದರೆ ಆ ಸಂದರ್ಭದಲ್ಲಿ ಬ್ರಿಟಿಷರು ಸಮಾಜದ ಅಂಕು-ಡೊಂಕುಗಳನ್ನು ಪ್ರದರ್ಶಿಸಲು ಹೋಳಿ ಸಂದರ್ಭ ಅನುಮತಿ ನೀಡಿದ್ದರಂತೆ. ಈ ಸಂದರ್ಭ ಬಳಸಿಕೊಂಡ ಇಲ್ಲಿನ ಹಾಲಕ್ಕಿಗಳು ಬ್ರಿಟಿಷರು ಭಾರತೀಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನೇ ತಮ್ಮ ಜಾನಪದ ಶೈಲಿಯಲ್ಲಿ ಹಾಸ್ಯ ವೇಷಗಳ ಮೂಲಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು, ಈ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆ ನೀಡುತ್ತಿದ್ದರು.ನಾನಾ ರೂಪಕಗಳು:
ವಿಡಂಬನಾ ಸ್ವಾತಂತ್ರ್ಯ ಮೆರೆಯುವ ಹೋಳಿ ಹಬ್ಬದಲ್ಲಿ ವಿವಿಧ ರೂಪಕಗಳು ಮಾ. 3ರಂದು ಪಟ್ಟಣದಲ್ಲಿ ಅನಾವರಣಗೊಳ್ಳಲಿದೆ. ಸಂಜೆ 4ರಿಂದ ಚಾಲನೆ ಪಡೆದುಕೊಳ್ಳಲಿರುವ ಈ ಐತಿಹಾಸಿಕ ಹಬ್ಬಕ್ಕೆ ಸಾವಿರಾರು ಜನರು ಸಾಕ್ಷಿಯಾಗಲಿದ್ದಾರೆ.