ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣೆಗಾಗಿ ಪಾದಯಾತ್ರೆ

KannadaprabhaNewsNetwork | Published : Feb 8, 2024 1:31 AM

ಸಾರಾಂಶ

ಚಾಮರಾಜನಗರ ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣೆಗಾಗಿ ಶುಕ್ರವಾರ ಚಂದಕವಾಡಿಯಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂರಕ್ಷಣಾ ಸಮಿತಿಯ ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ತಿಳಿಸಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರ ಚಾಮರಾಜನಗರ ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣೆಗಾಗಿ ಶುಕ್ರವಾರ ಚಂದಕವಾಡಿಯಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂರಕ್ಷಣಾ ಸಮಿತಿಯ ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು, ತಾಲೂಕಿನ ವ್ಯಾಪ್ತಿಯಲ್ಲಿ ಹಿರಿಯ ದಲಿತ ಮುಖಂಡರು ಹಾಗೂ ನಮ್ಮ ಪೂರ್ವಿಕರು ಸಮಾಜದ ಅಭಿವೃದ್ಧಿಗಾಗಿ ತಾಲೂಕು ಕೇಂದ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಘದ ಹೆಸರಿನಲ್ಲಿ ಆಸ್ತಿಗಳನ್ನು ನೋಂದಣಿ ಮಾಡಿದ್ದರು. ಇದು ಕೆ.ಸಿ.ರಂಗಯ್ಯನವರ ನಿಧನದ ನಂತರ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಮಾಜದ ಆಸ್ತಿಯನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಇದನ್ನು ಖಂಡಿಸಿ ಹಾಗೂ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಚಾಮರಾಜನಗರ ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ವತಿಯಿಂದ ನಡೆಯುವ ಪಾದಯಾತ್ರೆ ಗೆ ಸಮುದಾಯದ ಎಲ್ಲ ಗಡಿಕಟ್ಟೆಯ ಯಜಮಾನರು ಅಂಬೇಡ್ಕರ್ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾಜದ ಎಲ್ಲಾ ಮುಖಂಡರ ನೇತೃತ್ವದಲ್ಲಿ ಬೆಳಗ್ಗೆ 9 ಗಂಟೆ ಚಂದಕವಾಡಿ ಅಂಬೇಡ್ಕರ್ ಭವನದಿಂದ ಹೊರಟು ರಾಮಸಮುದ್ರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಿ.ರಾಚಯ್ಯ ಜೋಡಿ ರಸ್ತೆಯ ಮಾರ್ಗವಾಗಿ ಸಂಘದ ಆವರಣದಲ್ಲಿ ಸಮಾವೇಶಗೊಳ್ಳಲಾಗುತ್ತದೆ ಎಂದರು.

ಈ ಸಭೆಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್, ಶಾಸಕ ಎ.ಆರ್. ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ್ ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಈ ಸಬೆಗೆ ತಾಲೂಕಿನ ಎಲ್ಲಾ ಗಡಿಕಟ್ಟೆ ಯಜಮಾನರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಬೇಕು ಎಂದು‌ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯ ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಮುಖಂಡರಾದ ತಾಪಂ.ಮಾಜಿ ಅಧ್ಯಕ್ಷ ಆರ್. ಮಹದೇವು, ಮಾಜಿ ಸದಸ್ಯ ನಲ್ಲೂರು ಸೋಮೇಶ್ವರ, ನಾಗವಳ್ಳಿ ನಾಗಯ್ಯ, ಹೆಬ್ಬಸೂರು ರಂಗಸ್ವಾಮಿ, ಕೃಷ್ಣಮೂರ್ತಿ ಹಾಜರಿದ್ದರು.

Share this article