ಕನ್ನಡಪ್ರಭ ವಾರ್ತೆ ಮಡಿಕೇರಿ
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಜಿ.ಟಿ. ಚಂಗಪ್ಪ ಎಂಬುವವರು ಕಾಲೇಜಿಗೆ ತೆರಳಲು ಬಸ್ ಗಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರ್ ಎದುರಾದ ಕಾಡಾನೆ ಆತನನ್ನು ಬೆನ್ನಟ್ಟಿದೆ. ಚಂಗಪ್ಪ ಓಡಿ ಕಾಡಾನೆಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಓಡುವ ಸಂದರ್ಭ ಸಿಮೆಂಟ್ ರಸ್ತೆಗೆ ಬಿದ್ದು ಗಾಯವಾಗಿದೆ. ಅಲ್ಲದೇ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಆತನನ್ನು ವಿರಾಜಪೇಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಮರಿ ಆನೆಗಳೊಂದಿಗೆ ಮೂರಕ್ಕೂ ಹೆಚ್ಚು ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಾ ಜನರಿಗೆ ಭೀತಿಯನ್ನು ಹುಟ್ಟಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಇಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕು ಎಂದು ಗ್ರಾಮಸ್ಥರು ಸಂಬಂಧಿಸಿದವರನ್ನು ಒತ್ತಾಯಿಸಿದ್ದಾರೆ.ಎಸಿಎಫ್ ನೆಹರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಘಟನೆ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.