ಮಹಿಳೆ ಯಾರಿಗೂ ಭಾರವಲ್ಲ, ಎಲ್ಲರಿಗೂ ಆಧಾರ: ಸಾಹಿತಿ ಹನುಮಂತಗೌಡ ಗೊಲ್ಲರ

KannadaprabhaNewsNetwork |  
Published : Mar 25, 2025, 12:49 AM IST
ಹಾವೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕಿಯರ ಸನ್ಮಾನ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಮಹಿಳೆಗೆ ಅಧಿಕಾರ ನೀಡಿದ ಎಲ್ಲ ಕಡೆ ಅಭಿವೃದ್ಧಿ ಅಪ್ಪಳಿಸಿ ಬರುತ್ತದೆ. ದಕ್ಷತೆಗೆ ಮತ್ತೊಂದು ಹೆಸರು ಅವಳು. ಸ್ತ್ರೀಶಕ್ತಿ ಅಣುಶಕ್ತಿಗಿಂತ ಶಕ್ತಿಶಾಲಿಯಾದ ಸ್ತ್ರೀತ್ವದ ಗುಣಗಳಿಂದ ತುಂಬಿದಾಗ ಮಾತ್ರ ಯುದ್ಧಗಳು ಇಲ್ಲವಾಗುವುವು.

ಹಾವೇರಿ: ಮಹಿಳೆ ಯಾರಿಗೂ ಭಾರವಲ್ಲ, ಆದರೆ ಆಕೆ ಎಲ್ಲರಿಗೂ ಆಧಾರ. ಮನುಕುಲವು ಮುಂದುವರಿಯಲು ಮಾನವ ಸೃಷ್ಟಿಗೆ ಮಹಿಳೆಯೇ ಕಾರಣ. ಅವಳಿಲ್ಲವಾದರೆ ಈ ಸೃಷ್ಟಿಯೇ ಇಲ್ಲ, ಭೂಮಿಯೂ ಇಲ್ಲ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ತಿಳಿಸಿದರು.ಸ್ಥಳೀಯ ತಾಯಿ ಸೇವಾ ಫೌಂಡೇಶನ್ ಬೃಂದಾವನ ನಿವಾಸದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕಿಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಗೆ ಅಧಿಕಾರ ನೀಡಿದ ಎಲ್ಲ ಕಡೆ ಅಭಿವೃದ್ಧಿ ಅಪ್ಪಳಿಸಿ ಬರುತ್ತದೆ. ದಕ್ಷತೆಗೆ ಮತ್ತೊಂದು ಹೆಸರು ಅವಳು. ಸ್ತ್ರೀಶಕ್ತಿ ಅಣುಶಕ್ತಿಗಿಂತ ಶಕ್ತಿಶಾಲಿಯಾದ ಸ್ತ್ರೀತ್ವದ ಗುಣಗಳಿಂದ ತುಂಬಿದಾಗ ಮಾತ್ರ ಯುದ್ಧಗಳು ಇಲ್ಲವಾಗುವುವು ಎಂದರು.ಉಪನ್ಯಾಸಕಿ ರೂಪಾ ಮಾಲತೇಶ್ ಮಾಚೇನಹಳ್ಳಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಬದಲಾಗುತ್ತಿರುವುದನ್ನು ಕಾಣಬಹುದು, ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಮಹಿಳೆಯರು ದುಡಿಯದ ಕಾರ್ಯಕ್ಷೇತ್ರವೇ ಇಲ್ಲ. ಮಹಿಳೆ ಈ ಜಗದ ಕಣ್ಣು. ತ್ಯಾಗ, ಅಹಿಂಸೆಗಳ ಪುತ್ಥಳಿ. ಆದರೆ ಅವಳಲ್ಲಿ ಅಭದ್ರತೆ, ಅಸುರಕ್ಷತೆ ಕಾಡುತ್ತಿದೆ ಎಂದರು.ಸಾಹಿತಿ ಜುಬೇದ ನಾಯಕ್ ಮಾತನಾಡಿ, ಮಹಿಳೆಯೇ ಸರ್ವತೋಮುಖ ಪ್ರಗತಿಯೇ ದೇಶದ ಅಭಿವೃದ್ಧಿಗೆ ದಾರಿದೀಪ ಎಂದು ಹೇಳಿ, ಸ್ತ್ರೀ ಮಹತ್ವದ ಕುರಿತು ಕಾವ್ಯ ವಾಚನ ಮಾಡಿದರು.ರೇಣುಕಾ ಗುಡಿಮನಿ ಮಾತನಾಡಿ, ಮಹಿಳೆಯರು ತಮ್ಮ ಸಹಜ ಸಾಮರ್ಥ್ಯಗಳಿಗೆ ಅನುಗುಣವಾಗಿ ಬೆಳೆಯುವ ಸುರಕ್ಷಿತ ಪ್ರೋತ್ಸಾಹದಾಯಕ ವಾತಾವರಣ ನಿರ್ಮಾಣವಾಗಬೇಕು. ಇದರಲ್ಲಿ ಸಮಾಜದ ಪಾತ್ರ ಅಗತ್ಯವಾಗಿದೆ ಎಂದರು.

ರಾಣಿಬೆನ್ನೂರಿನ ಕಸ್ತೂರಿ ವಿನಾಯಕ್ ಹುಲಿಹಳ್ಳಿ(ಶಿಕ್ಷಣ), ರೇಣುಕಾ ಗುಡಿಮನಿ(ಸಂಘಟನೆ) ಹಾಗೂ ಜುಬೇದ ನಾಯಕ್‌(ಸಾಹಿತ್ಯ) ಅವರನ್ನು ಫೌಂಡೇಶನ್ ಉಪಾಧ್ಯಕ್ಷೆ ಸುವೇಧ ಲಕ್ಷ್ಮಿಪತಿ ಹಾಗೂ ಸಹ ಕಾರ್ಯದರ್ಶಿ ಭಾರತಿ ರಾಕೇಶ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಮಹಿಳೆ ಮತ್ತು ಸಮಾಜ ಕುರಿತು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಹಿರೇಲಿಂಗದಹಳ್ಳಿಯ ಪವಿತ್ರ ಗೋರಪ್ಪನವರ್, ನಗರದ ಮೀನಾಕ್ಷಿ ನಡಕಟ್ಟಿನ ಹಾಗೂ ಕೂಳೆನೂರಿನ ಗೀತಾ ಸೂರದ ಅವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಬಾಲಪ್ರತಿಭೆ ಲೋಕ್ಷಾ ಅವಳ ಭರತನಾಟ್ಯ ಪ್ರದರ್ಶನ ವಿಶೇಷ ಗಮನ ಸೆಳೆಯಿತು. ಭಾಗ್ಯಲಕ್ಷ್ಮಿ ರಾಘವೇಂದ್ರ, ಮುಖ್ಯ ಶಿಕ್ಷಕಿ ಪ್ರಭಾವತಿ ಕೊಪ್ಪದ, ಸಾವಿತ್ರಮ್ಮ ಗುಣತಿಮಠ, ನಿವೃತ್ತ ಶಿಕ್ಷಕ ಹೇಮಗಿರಿಗೌಡ ಗೊಲ್ಲರ, ಶೈಲಜಾ ಕೋರಿಶೆಟ್ಟರ, ಲಕ್ಕಣ್ಣವರ ಸಹೋದರಿಯರು, ಜಯಶ್ರೀ ಬಸಟ್ಟಿಯವರ, ಅಮೃತ, ಗೌತಮಿ, ಗಗನ ಮತ್ತಿತರರು ಉಪಸ್ಥಿತರಿದ್ದರು.ಶ್ರೇಯಾ ಪ್ರಾರ್ಥಿಸಿದರು. ಫೌಂಡೇಶನ್ ಉಪಾಧ್ಯಕ್ಷ ಡಾ. ಲಕ್ಷ್ಮೀಪತಿ ಸ್ವಾಗತಿಸಿದರು. ವಿಶ್ರುತ ಎಲ್.ಜಿ. ನಿರೂಪಿಸಿದರು. ಫಾರ್ಮಸಿ ಕಾಲೇಜಿನ ಉಪನ್ಯಾಸಕ ರಾಕೇಶ್ ಜಿ.ಎಚ್. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌