ಹಾನಗಲ್ಲ: ಸ್ವಚ್ಛತಾ ವಾಹನ ಚಾಲಕರು ಮಹಿಳೆಯರು, ಕಸ ಸಂಗ್ರಹಿಸುವವರೂ ಮಹಿಳೆಯರೇ, ಗ್ರಾಮಗಳ ಸ್ವಚ್ಛತೆಗಾಗಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಅದರಲ್ಲಿಯೇ ಇವರ ಸಂಭಾವನೆ ಭರಿಸುವ ಯೋಜನೆ ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲಿ ಚಾಲ್ತಿಯಲ್ಲಿದ್ದು, ಸ್ವಚ್ಛ ಗ್ರಾಮ ಯೋಜನೆಗೆ ಇದು ದೊಡ್ಡ ಹೆಜ್ಜೆಯಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ 2020ರಿಂದಲೇ ಆರಂಭವಾದ ಈ ಯೋಜನೆಗೆ ಸರ್ಕಾರ ಎಲ್ಲ 42 ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛತಾ ವಾಹನಗಳನ್ನು ನೀಡಿದೆ. ಅತ್ಯಂತ ಮುಖ್ಯವಾಗಿ ಗಮನಿಸುವಂತಹದ್ದು, ಈ ವಾಹನಗಳಿಗೆ ಮಹಿಳೆಯರೇ ಚಾಲಕಿಯರಾಗಬೇಕು ಎಂಬುದಾಗಿದೆ. ಇದರೊಂದಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ.ಆಯಾ ಗ್ರಾಮ ಪಂಚಾಯಿತಿಗಳ ಸ್ತ್ರಿಶಕ್ತಿ ಸಂಘಗಳ ಮೂಲಕ ಚಾಲಕಿ ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ಕೆಯಾದ ಚಾಲಕಿಯರಿಗೆ ವಾಹನ ತರಬೇತಿ ಶಾಲೆಗಳಲ್ಲಿ ತರಬೇತಿಯನ್ನು ನೀಡಿ ಅವರಿಗೆ ಈ ಚಾಲಕ ಜವಾಬ್ದಾರಿಯನ್ನು ನೀಡಲಾಗಿದೆ. ಎಲ್ಲ ಪಂಚಾಯಿತಿಗಳಲ್ಲೂ ಮಹಿಳೆಯರನ್ನೇ ಚಾಲಕಿಯರನ್ನಾಗಿ ಆಯ್ಕೆ ಮಾಡಲಾಗಿದೆ. ಚಾಲಕಿಯರಿಗೆ ತಿಂಗಳಿಗೆ ₹7 ಸಾವಿರ ಹಾಗೂ ಇಬ್ಬರು ಸ್ವಚ್ಛತಾ ಸಿಬ್ಬಂದಿಗೆ ತಲಾ ₹5 ಸಾವಿರ ಗೌರವಧನ ನೀಡಲಾಗುತ್ತಿದೆ. ಗ್ರಾಮದಲ್ಲಿನ ಕಸವನ್ನು ಸಂಗ್ರಹಿಸಿ ಅದನ್ನು ಹಸಿ ಕಸ, ಒಣ ಕಸವಾಗಿ ಬೇರ್ಪಡಿಸಿ, ಪ್ಲಾಸ್ಟಿಕ್ ಸೇರಿದಂತೆ ಕೊಳೆಯದ ವಸ್ತುಗಳನ್ನು ಬೇರೆ ಮಾಡುವುದು ಇಲ್ಲಿ ಬಹುಮುಖ್ಯ ಕಾರ್ಯವಾಗಿದೆ.ಅಕ್ಕಿಆಲೂರು ದೊಡ್ಡ ಪಂಚಾಯಿತಿ ಆಗಿರುವುದರಿಂದ ಅಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡ ಕಾರಣದಿಂದ ಅಲ್ಲಿ ಈ ವಾಹನ ಖರೀದಿ ಹಾಗೂ ಚಾಲಕಿಯರ ನೇಮಕ ಆಗಿಲ್ಲ. ಆದರೆ ಗೊಂದಿ, ಬಾಳಂಬೀಡ, ಶಿರಗೋಡ, ತಿಳವಳ್ಳಿ, ಯಳವಟ್ಟಿ, ಬೆಳಗಾಲಪೇಟೆ, ಮಾಸನಕಟ್ಟಿ, ಗ್ರಾಮಗಳಲ್ಲಿ ಡ್ರೈವರ್ ನೇಮಕ ಆಗಿಲ್ಲ ಎಂಬ ವರದಿ ಇದೆ. ಹಾನಗಲ್ಲ ತಾಲೂಕಿನ ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ವಾಹನ ಚಾಲಕಿಯರಿಗೆ ಉತ್ತಮ ತರಬೇತಿ ನೀಡಿ ಚಾಲನೆಗೆ ಅವಕಾಶ ನೀಡಲಾಗಿದೆ. ಇದು ಅತ್ಯುತ್ತಮ ಯೋಜನೆ ಹಾಗೂ ಯಶಸ್ವಿಯೂ ಹೌದು ತಾಪಂ ಇಒ ಪರಶುರಾಮ ಪೂಜಾರ ಹೇಳಿದರು.