ಸಾಧನೆ ಅರಿತರೆ ಮಹಿಳೆಯ ಯಶಸ್ಸು ಸಾಧ್ಯ

KannadaprabhaNewsNetwork | Published : Mar 8, 2025 12:33 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಾಧನೆಯು ನಿರಂತರ. ಅದನ್ನು ಅರಿತರೆ ಮಹಿಳೆ ತನ್ನ ಜೀವನದಲ್ಲಿ ಯಶಸ್ಸು ಗಳಿಸಬಲ್ಲಳು ಎಂದು ಕಲಬುರಗಿಯ ಕರ್ನಾಟಕ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಹೇಳಿದರು. ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫ದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಾಧನೆಯು ನಿರಂತರ. ಅದನ್ನು ಅರಿತರೆ ಮಹಿಳೆ ತನ್ನ ಜೀವನದಲ್ಲಿ ಯಶಸ್ಸು ಗಳಿಸಬಲ್ಲಳು ಎಂದು ಕಲಬುರಗಿಯ ಕರ್ನಾಟಕ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಹೇಳಿದರು. ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫ದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಎಷ್ಟು ಉನ್ನತ ಸ್ಥಾನಕ್ಕೇರಿದರೂ, ಅವರನ್ನು ಕೇವಲ ಅಡುಗೆಮನೆಗೆ ಮಾತ್ರ ಸೀಮಿತಗೊಳಿಸುವ ಪರಂಪರೆ ಚಿಂತನೆ ಇನ್ನೂ ಇದೆ. ಮಹಿಳೆಯರು ಧೈರ್ಯದಿಂದ ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ. ಮಹಿಳೆಯರು ಮುಂದುವರಿಯಲು ಕೇವಲ ಸೌಂದರ್ಯವಷ್ಟೆ ಅಲ್ಲ, ಅವರ ಗುಣ, ಸಾಧನೆ ಹಾಗೂ ನಡೆ-ನುಡಿಗಳು ಮುಖ್ಯವಾಗಿವೆ ಎಂದರು.

ಸಾಮಾಜಿಕ ಕಾರ್ಯಕರ್ತ ರೂಮಿ ಹರೀಶ ಮಾತನಾಡಿ, ಮಾನವ ಹಕ್ಕುಗಳೇ ಮಹಿಳಾ ಹಕ್ಕುಗಳಾಗಿದ್ದರೂ, ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪರಿಸ್ಥಿತಿ ಇದೆ. ಕುಟುಂಬದಲ್ಲಿ ಕೌಟುಂಬಿಕ ದೌರ್ಜನ್ಯ, ಮನಸ್ತಾಪ ಉಂಟುಮಾಡುವ ಕಿರುಕುಳ, ಹಾಗೂ ಸಮಾಜದಲ್ಲಿ ಶೋಷಣೆ, ಅಸಮಾನತೆ ಮತ್ತು ಆರ್ಥಿಕ-ಶೈಕ್ಷಣಿಕ ಅಡೆತಡೆಗಳು ಅವರ ಮುನ್ನಡೆಗೆ ಬಾಧಕವಾಗುತ್ತಿವೆ. ಆದರೂ, ಈ ಎಲ್ಲ ಸವಾಲುಗಳನ್ನು ಧೈರ್ಯ, ಮನೋಬಲ ಮತ್ತು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ ಮಹಿಳೆಯಲ್ಲಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಗೌರವ ಪ್ರತಿಯೊಬ್ಬ ಮಹಿಳೆಯ ಹಕ್ಕುಗಳು ಆಗಬೇಕಾಗಿದ್ದು, ಅದನ್ನು ಸಾಧಿಸಲು ನಿರಂತರ ಹೋರಾಟ ಮತ್ತು ಶಿಕ್ಷಣ ಅವಶ್ಯಕವಾಗಿದೆ. ಮಹಿಳೆಯರ ಸಬಲತೆ ಮತ್ತು ಸ್ವಾಯತ್ತತೆಯೇ ನಿಜವಾದ ಪ್ರಗತಿಯ ದಾರಿ ಎಂದು ಹೇಳಿದರು.

ಕುಲಸಚಿವ ಶಂಕರಗೌಡ ಸೋಮನಾಳ ರಸ ಪ್ರಶ್ನೇ ಕೇಳುವುದರ ಮೂಲಕ ವಿದ್ಯಾರ್ಥಿನಿಯರಿಗೆ ಹುರಿದುಂಬಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಸಮಾನತೆ, ಹಕ್ಕು, ಮತ್ತು ಸಬಲೀಕರಣ ಎನ್ನುವುದು ಇಗಲುಕೂಡಾ ಅವಶ್ಯಕತೆ ಇದೆ. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಚಿಂತನೆ ಮತ್ತು ಕಾರ್ಯಾಚರಣೆ ಅಗತ್ಯ. ಸರ್ಕಾರ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಹಲವು ಯೋಜನೆಗಳು ಮತ್ತು ನೀತಿಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮಹಿಳೆಯರು ತಮ್ಮ ಜೀವನದಲ್ಲಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಸಿಂಡಿಕೇಟ್ ಸದಸ್ಯೆ ಮಲ್ಲಮ್ಮಾ ಯಾಳವಾರ ಮಾತನಾಡಿ, ಸಂವಿಧಾನ ಮಹಿಳೆಯರಿಗೆ ಹಕ್ಕುಗಳನ್ನು ನೀಡಿದರೂ, ನಾವೀಗಲೂ ಸಬಲೀಕರಣವನ್ನು ಅನುಭವಿಸುವ ಸ್ಥಿತಿಗೆ ಬಂದಿಲ್ಲ. ಮಹಿಳಾ ಸಬಲೀಕರಣ ಶಿಕ್ಷಣದ ಮೂಲಕವೇ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ ಮಾತನಾಡಿ, ಶಿಕ್ಷಣ ಪಡೆದರೆ ಆರ್ಷಿಕವಾಗಿ ಮುನ್ನಡೆದರೆ ಮಾತ್ರ ಮಹಿಳಾ ಸಬಲೀಕರಣವಾಗುವುದಿಲ್ಲ, ಎಲ್ಲ ಕೇತ್ರಗಳಲ್ಲೂ ಮಹಿಳೆ ಮುಂದೆ ಸಾಗುವಂತಾದಾಗ ಮಾತ್ರ ಸಾಧ್ಯ. ದೇಶದ ಅಭಿವೃದ್ಧಿಯಲ್ಲಿ ಸಮಾನ ಅವಕಾಶ ಮಹಿಳೆಯದಾಗಬೇಕು. ವಿವಿಧ ಅಭಿವೃದ್ಧಿಯನ್ನು ಸಾಧಿಸುವಲ್ಲಿ ನಮ್ಮ ಮಹಿಳಾ ವಿವಿ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫ ಆರಂಭಕ್ಕೂ ಮುನ್ನ ಕನ್ನಡ ಸಂಸ್ಕೃತಿ ಇಲಾಖೆಯಿಂದ ಡೊಳ್ಳುಕುಣಿತ, ಬಂಜಾರಾ ಸಮುದಾಯದ ಯುವತಿಯರಿಂದ ನೃತ್ಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ಲೇಜಿಮ್ ಮೂಲಕ ವಿವಿಯ ಮುಂಭಾಗದಿಂದ ವೇದಿಕೆಯ ವರೆಗೆ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನ್‌ರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಮತ್ತು ಹೋರಾಟ ಗೀತೆಯನ್ನು ಹಾಡಿದರು. ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ. ಲಕ್ಷ್ಮೀದೇವಿ.ವೈ ಸ್ವಾಗತಿಸಿದರು.

Share this article