ಕನ್ನಡಪ್ರಭ ವಾರ್ತೆ ಅರಕಲಗೂಡು
ಮಹಿಳೆಯರು ಸಾಮಾಜಿಕವಾಗಿ ನಿರಂತರ ಶೋಷಣೆಗೆ ಒಳಗಾಗುತ್ತಿದ್ದು, ಇದರಿಂದ ಮುಕ್ತರಾಗಲು ತನ್ನ ಸಾಮರ್ಥ್ಯ ಏನು ಎಂಬ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ತಹಶೀಲ್ದಾರ್ ಕೆ. ಸಿ. ಸೌಮ್ಯ ತಿಳಿಸಿದರು.ಅರಕಲಗೂಡು ದಸರಾ ಉತ್ಸವದ ಪ್ರಯುಕ್ತ ಪಟ್ಟಣದ ಗಣಪತಿ ಕೊತ್ತಲು ಉದ್ಯಾನದಲ್ಲಿ ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಿಳೆಯರ ಮೇಲಿನ ಶೋಷಣೆ ಇಂದು ನಿನ್ನೆಯದಲ್ಲ, ಇದು ರಾಮಾಯಣ, ಮಹಾಭಾರತದ ಕಾಲದಿಂದಲೂ ನಡೆದು ಬಂದಿದೆ. ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಹೇರಳವಾದ ಅವಕಾಶಗಳು ಲಭ್ಯವಿದ್ದು ಅದನ್ನು ಸಮರ್ಥವಾಗಿ ಬಳಸಿಕೊಳ್ಳವ ಮೂಲಕ ಸಬಲತೆ ಸಾಧಿಸಬೇಕು ಎಂದರು.
ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ವೇತ ಮಂಜುನಾಥ್ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದರೂ ಇನ್ನೂ ಪ್ರಶ್ನಾರ್ಥಕ ಚಿನ್ಹೆ ಎದುರಾಗುವುದು ನಿಂತಿಲ್ಲ. ಮಹಿಳೆಯರು ಮನೆಯಂಗಳಕ್ಕೆ ಸೀಮಿತಗೊಳ್ಳದೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಬೇಕಿದೆ. ಕುಟುಂಬದವರು ಹೆಣ್ಣುಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಲು ಪ್ರೋತ್ಸಾಹಿಸಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಕಳೆದ ಮೂವತ್ತು ವರ್ಷಗಳ ಹಿಂದೆ ನಡೆಸಿದ ಹೆಣ್ಣುಭ್ರೂಣ ಹತ್ಯೆಯ ಪರಿಣಾಮ ಇಂದು ವಿವಾಹಕ್ಕೆ ಹೆಣ್ಣು ಸಿಕ್ಕದೆ ಪರಿತಪಿಸುವ ಸ್ಥಿತಿ ಎದುರಾಗಿದೆ. ಇದರಿಂದ ಎಚ್ಚೆತ್ತುಕೊಳ್ಳುವ ಬದಲು ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಮುಂದುವರೆದಿದೆ. ಇದರಲ್ಲಿ ಮಹಿಳೆಯರೂ ಪಾಲ್ಗೊಳ್ಳುತ್ತಿರುವುದು ನೋವಿನ ಸಂಗತಿ. ಹೆಣ್ಣು ಜೀವವನ್ನು ಭ್ರೂಣದಲ್ಲೆ ಚಿವುಟಿಹಾಕುವಂತಹ ಹೀನ ಕೃತ್ಯವನ್ನು ತಡೆಯದಿದ್ದರೆ ಮುಂದಿನ ದಿನಗಳು ಇನ್ನಷ್ಟು ಸಂಕಟಮಯವಾಗಲಿದೆ. ಮಹಿಳೆಯರು ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದರು. ಕ್ಯಾನ್ಸರ್ ತಜ್ಞ ಡಾ. ಸಿ.ಎನ್ ಜಗದೀಶ್ ಮಹಿಳೆಯರನ್ನು ಕಾಡುವ ಕ್ಯಾನ್ಸರ್‌ನ ವಿಧಗಳು, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಪಟ್ಟಣ ಪಂಚಾಯಿತಿ ಸದಸ್ಯೆ ಲಕ್ಷ್ಮೀ ಲೋಕೇಶ್, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು. ಪಪಂ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಬಾನ್ ಷರೀಫ್, ಸದಸ್ಯೆ ಅನುಷಾ ಹರೀಶ್, ಸಿಡಿಪಿಒ ಎಂ.ಪಿ. ವೆಂಕಟೇಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಿಂದು, ರಾಕೇಶ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಅಂಬಿಕಾ, ಆಶಾಮೆಂಟರ್ ಕವಿತಾ, ದಸರಾ ಸಮಿತಿ ಸದಸ್ಯರಾದ ಎ.ಎಂ.ರಘು, ಭಾಸ್ಕರ್, ಮಂಜುನಾಥ್, ತುಳಸಿರಾಮ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಹಾಗೂ ಹಾಸನದ ಹಿಮ್ಸ್ ವೈದ್ಯರಿಂದ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಆರೋಗ್ಯ ತಪಾಸಣೆ ನಡೆಸಲಾಯಿತು.