ಸಂಸಾರ, ಸಮಾಜದ ಸಮತೋಲನ ಕಾಯ್ದುಕೊಂಡಿರುವ ಮಹಿಳೆ

KannadaprabhaNewsNetwork | Published : Mar 11, 2024 1:21 AM

ಸಾರಾಂಶ

ಅಪಾರ ಪ್ರತಿಭೆ ಹೊಂದಿರುವ ಮಹಿಳೆಯರು ಸಂಸಾರ ಹಾಗೂ ಸಮಾಜದ ಸಮತೋಲನದ ನಡುವೆ ಸಾಧನೆ ಮಾಡುತ್ತಿದ್ದಾರೆ.

ಚಿತ್ರದುರ್ಗ: ಅಪಾರ ಪ್ರತಿಭೆ ಹೊಂದಿರುವ ಮಹಿಳೆಯರು ಸಂಸಾರ ಹಾಗೂ ಸಮಾಜದ ಸಮತೋಲನದ ನಡುವೆ ಸಾಧನೆ ಮಾಡುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ‌ ಕೆ.ಬಿ.ಗೀತಾ ಹೇಳಿದರು.

ಭಾನುವಾರ ಚಿತ್ರದುರ್ಗ ಮಠದ ಕುರುಬರಹಟ್ಟಿ ಬಸವೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಬಸವೇಶ್ವರ ವಿದ್ಯಾಸಂಸ್ಥೆ, ರೈನ್ ಟ್ರಸ್ಟ್, ಸ್ವಯಂ ಸೇವಾ ಸಂಸ್ಥೆ ಮತ್ತು ವಿವಿಧ ಮಹಿಳಾ ಸ್ವ-ಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸದಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರು ಸಂಸಾರ, ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಒಡನಾಟ ಸಂಭಾಳಿಸಿಕೊಂಡು ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾಳೆ. ಶೋಷಣೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇತ್ತೀಚಿಗೆ ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ಶೋಷಣೆ ತಗ್ಗಿರುವುದು ಸಂತಸದ ವಿಚಾರ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ.ವಿಜಯ್‌‌ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ‌ ಸಾಧನೆ ಮಾಡಿದ್ದಾರೆ. ಪ್ರಮುಖ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಮಾತಿಗೆ ವೇದಿಕೆ ಸಾಕ್ಷಿಯಾಗಿದೆ ಎಂದರು.

ಅಪರಾಧ ಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ, ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗಲು ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದು. ಮಹಿಳೆಯರು ಸಾಮಾಜಿಕ ಸ್ಥಾನಮಾನ ಭದ್ರಪಡಿಸಿಕೊಳ್ಳಬೇಕು. ಕಾನೂನಿನ ಅರಿವಿನ ಜೊತೆಗೆ ಹಕ್ಕುಗಳ ರಕ್ಷಣೆ ಮಾಡಿಕೊಳ್ಳಬೇಕು. ಅನ್ಯಾಯ ಹಾಗೂ ದೌರ್ಜನ್ಯದ ಸಂದರ್ಭಗಳನ್ನು‌ ಧೈರ್ಯವಾಗಿ ಎದುರಿಸಬೇಕು ಎಂದರು.

ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ ಅಧ್ಯಕ್ಷತೆವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಐ.ಬಿ.ಅಕ್ಷತಾ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ಪಿ.ಜಿ.ಅನಿತಾ ಲಕ್ಷ್ಮಿ ಆಚಾರ್ಯ, ಕೋಡೇನಹಟ್ಟಿ ಟಿ.ಸುಮಾ, ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್, ಪರಿಸರವಾದಿ ಪಿ.ವಿ ಮಲ್ಲಿಕಾರ್ಜುನಪ್ಪ, ಸಮಾಜ ಸೇವಕರಾದ ಮಾರಗಟ್ಟ ತಿಪ್ಪೇಸ್ವಾಮಿ, ಕಿರಣ್, ಶಂಕರಪ್ಪ, ವಿವಿಧ ಮಹಿಳಾ ಸಂಘದ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಎಂ.ಮಂಜುನಾಥ್ ಕಳ್ಳಿಹಟ್ಟಿ ಇವರು ಪ್ರಾಸ್ತಾವಿಕ ಮಾತನಾಡಿದರು. ವಿ.ತಿಪ್ಪೇಸ್ವಾಮಿ ಮಲ್ಲೂರಹಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share this article