ಮಿನಿ ವಿಧಾನಸೌಧದಲ್ಲಿ ವಿಶ್ವಮಾನವ ದಿನಾಚರಣೆಯಲ್ಲಿ ಶಾಸಕ ಎಚ್.ಟಿ.ಮಂಜು ಭಾಗಿ । ಪ್ರತಿಭಾವಂತ ಸಾಹಿತಿಗಳಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡರೆ ಯುದ್ದದ್ವೇಷ, ಅಸೂಯೆ ಮತ್ತು ಸಂಘರ್ಷದಿಂದ ಹೊರಬರಲು ಸಾಧ್ಯ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕುವೆಂಪು ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ನಾಡು, ನುಡಿ, ನೆಲ-ಜಲ ಮತ್ತು ನಾಡಿನ ಶ್ರೀ ಸಾಮಾನ್ಯರ ಬಗ್ಗೆ ಕುವೆಂಪು ಅವರಿಗಿದ್ದ ಕಾಳಜಿ ಅಪಾರ ಎಂದರು.ಕುವೆಂಪು ಅವರ ಕಥೆ, ಕವನ ಕಾದಂಬರಿ, ಮಹಾಕಾವ್ಯ ಮತ್ತು ಲೇಖನಗಳು ಶ್ರೀಸಾಮಾನ್ಯರ ಏಳಿಗೆಯ ಆಶಯವನ್ನು ಹೊಂದಿದ್ದು ತುಳಿತಕ್ಕೊಳಗಾದ ಜನರ ಆಶಯಗಳು ನನಸಾಗಬೇಕೆಂಬ ಕಳಕಳಿ ಹೊಂದಿದ್ದರು. ಆದರೆ, ಇವತ್ತಿನ ಪರಿಸರದಲ್ಲಿ ನಾವು ಮಹಾಕವಿಯ ಆಶಯಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಅವರ ಸಾಹಿತ್ಯ ಭಂಡಾರವನ್ನು ಓದುವ ಮತ್ತು ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಂದೆ ಸಾಗಬೇಕು ಎಂದು ಹೇಳಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ಕುವೆಂಪು ಅವರ ಆಶಯದಂತೆ ಸಮಾಜದ ಎಲ್ಲಾ ಸ್ಥರಗಳ ಜನರ ಬದುಕು ಹಸನಾಗಬೇಕು. ನಾಡಿನ ಆಸ್ತಿಯಾದ ಕುವೆಂಪು ಆಶಯಗಳು ನಮ್ಮದಾಗಬೇಕು ಎಂದರು.ತಹಸೀಲ್ದಾರ್, ನಿಸರ್ಗಪ್ರಿಯ ಸಾಹಿತಿಗಳಾದ ಡಾ.ನರಸಿಂಹರಾಜು ಮತ್ತು ಬಲ್ಲೇನಹಳ್ಳಿ ಮಂಜನಾಥ್ ಕುವೆಂಪು ಬದುಕು ಮತ್ತು ಸಾಹಿತ್ಯದ ಬಗ್ಗೆ ಮಾತನಾಡಿದರು. ಸಾಹಿತಿಗಳಾದ ಕೆ.ಜಿ.ನಾಗರಾಜು, ಮಾರೇನಳ್ಳಿ ಲೋಕೇಶ್, ಬಲ್ಲೇನಳ್ಳಿ ಮಂಜುನಾಥ್, ವೇದಾವತಿ ರವೀಂದ್ರ ಮತ್ತು ಕು:ಬಿಂದುಶ್ರೀ ಅವರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಮಾಜದ ಮತ್ತು ಸಂಘ- ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು. ಕಾಲೇಜುಗಳ ಪ್ರಾಂಶುಪಾಲರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.--------
29ಕೆಎಂಎನ್ ಡಿ27ಕೆ.ಆರ್.ಪೇಟೆ ಮಿನಿ ವಿದಾನಸೌಧದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಸಾಹಿತಿಗಳನ್ನು ಅಭಿನಂದಿಸಲಾಯಿತು.