ಕನ್ನಡಪ್ರಭ ವಾರ್ತೆ ವಿಜಯಪುರ
ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದ ಶ್ರೀಶೈಲ ರಾಮತೀರ್ಥ ಎಂಬಾತನೇ ಮೊಬೈಲ್ ಟವರ್ ಏರಿದ ಯುವಕ. ವಯಸ್ಸು 32 ಮೀರುತ್ತಿದ್ದರೂ ಮದುವೆಗೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ಬೆಳ್ಳಂಬೆಳಗ್ಗೆ ಟವರ್ ಏರಿ ಕುಳಿತಿದ್ದ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ತಿಕೋಟಾ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರೀಶೈಲ ರಾಮತೀರ್ಥನ ಮನವೊಲಿಸಿ ಕೆಳಗಿಳಿಸಿದ್ದಾರೆ.
ಇದೇ ಮೊದಲಲ್ಲದೆ ಈತ ಮದ್ಯಕ್ಕಾಗಿ ಹಾಗೂ ಗುಟಕಾ ಬೇಕೆಂದು ಈ ಹಿಂದೆಯೂ 2 ಬಾರಿ ಮೊಬೈಲ್ ಟವರ್ ಏರಿದ್ದ. ಆವಾಗಲೂ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಶ್ರೀಶೈಲನ ಮನವೊಲಿಸಿ ಕೆಳಗಿಳಿಸಿದ್ದೆವು ಎಂದು ಅಗ್ನಿಶಾಮಕ ದಳದ ಅಧಿಕಾರಿ ಉಮೇಶ ತಳಕೇರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಪದೇ ಪದೇ ಮೊಬೈಲ್ ಟವರ್ ಏರಿ ಕಿರಿಕ್ ಮಾಡುತ್ತಿರುವ ಯುವಕನ ಕಿರಿಕಿರಿಯಿಂದಾಗಿ ಸ್ಥಳೀಯರು ಸಹ ಬೇಸತ್ತಿದ್ದಾರೆ.