ಚೇಲಾವರ ಜಲಪಾತದಲ್ಲಿ ಮುಳುಗಿ ಯುವಕ ಸಾವು

KannadaprabhaNewsNetwork |  
Published : Feb 05, 2024, 01:47 AM ISTUpdated : Feb 05, 2024, 04:11 PM IST
ಚೇಲಾವರಜಲಪಾತದಲ್ಲಿ ಯುವಕನೊಬ್ಬ ನೀರುಪಾಲಾದದಾರುಣ ಘಟನೆ.4-ಎನ್ ಪಿಕೆ-2.ಚೇಲಾವರಜಲಪಾತದಲ್ಲಿ ನೀರುಪಾಲಾದ     ಮೃತರಶೀದ್(25)4-ಎನ್ ಪಿಕೆ-3.ಚೇಲಾವರಜಲಪಾತದ ದಾರಿಗೆ ಬೇಲಿ ಅಳವಡಿಸಲಾಗಿದ್ದರೂ,  ಫಾಲ್ಸ್ನೋಡಲು ಬಂದವರು ಬೇಲಿಯನ್ನು ನುಸುಳಿಒಳ ಪ್ರವೇಶಿಸುತ್ತಾರೆ. | Kannada Prabha

ಸಾರಾಂಶ

ಕೇರಳದ ಕಣ್ಣೂರಿನಿಂದ ರಶೀದ್, ಮಹಮ್ಮದ್ ಶಾಲಿ ಹಾಗೂ ಇಬ್ಬರು ಯುವತಿಯರು ಭಾನುವಾರ ಬೆಳಗ್ಗೆ ಚೇಲಾವರ ಫಾಲ್ಸ್ ವೀಕ್ಷಣೆಗೆಂದು ಬಂದಿದ್ದರು. ರಶೀದ್, ಜಲಪಾತದ ಕೆಳಭಾಗದ ಹೊಂಡದಲ್ಲಿ ಸ್ನಾನ ಮಾಡಲು ಪ್ರಯತ್ನಿಸಿದ್ದು, ಸುಳಿಗೆ ಸಿಲುಕಿ ಮುಳುಗಿದ್ದಾನೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಚೆಯ್ಯ೦ಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತಕ್ಕೆ ಇಳಿದ ಯುವಕನೊಬ್ಬ ನೀರುಪಾಲಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಕೇರಳದ ಕಣ್ಣೂರಿನ ಇರಿಟ್ಟಿಯ ಮಹಮ್ಮದ್ ಅಶ್ರಫ್ ಎಂಬವರ ಪುತ್ರ, ರಶೀದ್‌ (25) ಮೃತರು.

ಕೇರಳದ ಕಣ್ಣೂರಿನಿಂದ ರಶೀದ್, ಮಹಮ್ಮದ್ ಶಾಲಿ ಹಾಗೂ ಇಬ್ಬರು ಯುವತಿಯರು ಭಾನುವಾರ ಬೆಳಗ್ಗೆ ಚೇಲಾವರ ಫಾಲ್ಸ್ ವೀಕ್ಷಣೆಗೆಂದು ಬಂದಿದ್ದರು. 

ಯುವತಿಯರು ಕ್ಯಾಲಿಕಟ್‌ನಲ್ಲೂ, ಯುವಕರು ಮಟ್ಟನೂರಿನಲ್ಲೂ ಖಾಸಗಿ ಪ್ರವಾಸಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮಧ್ಯಾಹ್ನದ ಬಿಸಿಲಿನ ಝಳಕ್ಕೆ ರಶೀದ್, ಜಲಪಾತದ ಕೆಳಭಾಗದ ಹೊಂಡದಲ್ಲಿ ಸ್ನಾನ ಮಾಡಲು ಪ್ರಯತ್ನಿಸಿದ್ದು, ಸುಳಿಗೆ ಸಿಲುಕಿ ಮುಳುಗಿದ್ದಾನೆ. 

ಮಾಹಿತಿ ಅರಿತ ಪೊಲೀಸ್ ಸಿಬ್ಬಂದಿ ಭಾಗಮಂಡಲ ಹರ್ಷವರ್ಧನ್‌ ಮೃತದೇಹವನ್ನು ಹೊರಕ್ಕೆಳೆಯಲು ಪ್ರಯತ್ನಿಸಿದರಾದರೂ ವಿಫಲರಾದರು. 

ಬಳಿಕ ಮಡಿಕೇರಿಯ ಅಗ್ನಿಶಾಮಕ ದಳದ ಸಿಬ್ಬಂದಿ ಮಹಮ್ಮದ್, ನಂಜಪ್ಪ ಮತ್ತು ಶಾಹಿದ್ ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲೆತ್ತಿದರು.

ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣದ ಬಗ್ಗೆ ಮೃತರ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಧರ್, ರೈಟರ್ ಪ್ರದೀಪ್‌ ಮತ್ತು ಸಿಬ್ಬಂದಿ ಶರತ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂದ್ದಾರೆ.ಚೇಲಾವರ ಫಾಲ್ಸ್‌ಗೆ ಯಾವುದೇ ಭದ್ರತೆ ಇಲ್ಲ:

ಚೇಲಾವರ ಫಾಲ್ಸ್‌ನಲ್ಲಿ ಪ್ರವಾಸಿಗರಿಗೆ ಯಾವುದೇ ಭದ್ರತೆ ಇಲ್ಲ. ಈ ಕಾರಣದಿಂದ ಆಗಿಂದಾಗ್ಗೆ ಇಂತಹ ದುರ್ಘಟನೆಗಳು ನಡೆಯುತ್ತಲೇ ಇವೆ. ಇಲ್ಲಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆ ವ್ಯವಸ್ಥೆಯೂ ಇಲ್ಲ. 

ಫಾಲ್ಸ್‌ ಸುರಕ್ಷಿತವಾಗಿ ನೋಡಲು ತೂಗುಸೇತುವೆ ನಿರ್ಮಾಣ ಮಾಡಬೇಕೆಂಬ ಸ್ಥಳೀಯರ ಕೋರಿಕೆ ಕಸದ ಬುಟ್ಟಿ ಸೇರಿದೆ. ಬೇಲಿ ಅಳವಡಿಸಲಾಗಿದ್ದರೂ, ಫಾಲ್ಸ್ ನೋಡಲು ಬಂದವರು ಬೇಲಿಯನ್ನು ನುಸುಳಿ ಒಳ ಪ್ರವೇಶಿಸುತ್ತಾರೆ. ಬೇಲಿಗೆ ಜಾಲರಿ ಹಾಕಬೇಕೆಂಬ ಕೋರಿಕೆಯೂ ಇದೆ.

ಜಲಪಾತದಲ್ಲಿ ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಈ ಹಿಂದೆಯೇ ನಿರ್ಣಯ ಮಾಡಿತ್ತು. ಕಬ್ಬೆ ಬೆಟ್ಟಕ್ಕೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಚೇಲಾವರ ಜಲಪಾತಕ್ಕೂ ಬರುತ್ತಾರೆ. 

ಕೆಲವು ಸಮಯಗಳ ಹಿಂದೆ ಜಲಪಾತದ ಬಳಿ ಮುಖ್ಯ ರಸ್ತೆಗೆ ಗೇಟ್ ನಿರ್ಮಿಸಿ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಜಲಪಾತದಲ್ಲಿ ನೀರು ಕ್ಷೀಣಿಸಿದ್ದು, ಈ ಪ್ರದೇಶ, ಅಪರಿಚಿತರಿಗೆ ಮೃತ್ಯುತಾಣವಾಗಿ ಬದಲಾಗಿದೆ.

 ಚೇಲಾವರ ಜಲಪಾತವನ್ನು ಮರೆತಿರುವ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ