ಕನ್ನಡಪ್ರಭ ವಾರ್ತೆ ಮುಂಬೈ
ಮುಂಬೈ-ಗುಜರಾತ್ ರಾಷ್ಟ್ರೀಯ ಹೆದ್ದಾರಿಯ ಗೋಡ ಬಂದರ್ ರಸ್ತೆಯಲ್ಲಿ ಭಾರತ್ ಏರೋಪ್ಲೇನ್ ಎಂಬ ಶುದ್ಧ ಸಸ್ಯಹಾರಿ ಹೋಟೆಲ್ ಅನ್ನು ತಿಪಟೂರು ತಾಲೂಕು ನೊಣವಿನಕೆರೆಯ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳು ಶನಿವಾರ ಉದ್ಘಾಟಿಸಿದರು. ಉದ್ಘಾಟನೆ ನಂತರ ಮಾತನಾಡಿದ ಶ್ರೀಗಳು, ಕರ್ನಾಟಕದ ಒಂದು ಪುಟ್ಟ ಹಳ್ಳಿಯಿಂದ ಬಂದ ಈ ಹುಡುಗ ಉದ್ಯಮನಗರಿಯಲ್ಲಿ ಇನ್ನೂ ಹೆಚ್ಚೆಚ್ಚು ಉದ್ಯಮಗಳನ್ನು ಸ್ಥಾಪಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡುವ ಶಕ್ತಿ ಪಡೆಯಲಿ ಎಂದು ಆಶೀರ್ವದಿಸಿದರು.ಭಾರತ್ ಏರೋಪ್ಲೇನ್ ರೆಸ್ಟೋರೆಂಟ್ ಸ್ಥಾಪಿಸಿದವರು ಮುಂಬೈನವರಲ್ಲ. ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಚಟ್ಟನಹಳ್ಳಿಯ ಡಾ। ಪರಮೇಶ್ವರ ಲಿಂಗಾಯತ. ಅವರು ಒಂದು ಹಳೆ ವಿಮಾನವನ್ನು ₹2 ಕೋಟಿಗೆ ಖರೀದಿಸಿ ಅದರಲ್ಲಿದ್ದ ಆಸನಗಳನ್ನು ತೆಗೆದು, ಅದನ್ನು ಹೋಟೆಲಾಗಿ ನವೀಕರಿಸಿದ್ದಾರೆ. ಸುಸಜ್ಜಿತ ಕುರ್ಚಿ, ಟೇಬಲ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿ, ಜಗಮಗಿಸುವಂತೆ ಸಜ್ಜುಗೊಳಿಸಿದ್ದಾರೆ. ವಿಮಾನದಲ್ಲೇ ಕುಳಿತು ಊಟ ಮಾಡುವ ಅನುಭವವನ್ನು ಪಡೆಯುವ ವಾತಾವರಣ ನಿರ್ಮಿಸಿದ್ದಾರೆ. ಇಂತಹ ಹೋಟೆಲ್ ದೆಹಲಿಯನ್ನು ಬಿಟ್ಟರೆ ಮುಂಬೈನಲ್ಲಿ ಇದೇ ಮೊದಲು. ಮಕ್ಕಳು ಊಟದ ನಂತರ ವಿಮಾನದಿಂದ ಕೆಳಗಿಳಿದು ಆಟವಾಡಲು ಎಲ್ಲ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ ಎಂದು ಹೇಳಿದರು.
ಡಾ। ಪರಮೇಶ್ವರ ಲಿಂಗಾಯತ ಅವರಿಗೆ ತಮ್ಮ ಜಿಲ್ಲೆಯಲ್ಲಿ ಸೂಕ್ತ ಕೆಲಸ ಸಿಗಲಿಲ್ಲ. ಹೀಗಾಗಿ, ಮುಂಬೈನಲ್ಲಿ ನೆಲೆಸಿದ್ದ ಅವರ ಸೋದರ ಮಾವ ಮಂಜುನಾಥ್ ಇವರನ್ನು ಮುಂಬೈಗೆ ಕರೆಸಿ, ಇವರಿಗೆ ಆಶ್ರಯ ನೀಡಿದರು. ಉದ್ಯೋಗ ಅರಸಿ ಇಲ್ಲಿಗೆ ಬಂದ ಪರಮೇಶ್ವರ ಅವರು ಆರಂಭದಲ್ಲಿ ತಮ್ಮ ತಾಯಿ ಸರೋಜಮ್ಮ ಹೆಸರಿನಲ್ಲಿ ‘ಸರೋಜಾ ಪ್ಯಾಲೇಸ್’ ಎಂಬ ಹೋಟೆಲ್ ಸ್ಥಾಪಿಸಿದರು. ಮುಂಬೈನಲ್ಲಿ ನಾಲ್ಕು ಹೋಟೆಲ್‌ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ 2 ಹೋಟೆಲ್‌ಗಳನ್ನು ತೆರೆದಿದ್ದಾರೆ. ಇದು ಒಬ್ಬ ಕನ್ನಡಿಗನ ಹೆಗ್ಗಳಿಕೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಶ್ರೀಗಳು ಹೇಳಿದರು.