ಈರಪ್ಪ ನಾಯ್ಕರ್ ಹುಬ್ಬಳ್ಳಿ
ಇಲ್ಲಿನ ಆನಂದ ನಗರದ ಸಮೀಪ ಘೋಡಕೆ ಪ್ಲಾಟ್‌ನ ಮಲ್ಲೇಶ್ವರ ನಗರದಲ್ಲಿ ತನ್ನ ತಾಯಿ, ಅಕ್ಕಂದಿರೊಂದಿಗೆ ವಾಸವಾಗಿರುವ ಈ ಯುವಕನ ಹೆಸರು ''''''''ಮನೋಜ್ ಅರ್ಕಾಟ್''''''''. ಖಾಸಗಿ ಮಳಿಗೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮನೋಜ್ ಶ್ರೀರಾಮನ ಪರಮಭಕ್ತ.
ತಾಯಿ-ಅಕ್ಕನ ಆಶೀರ್ವಾದ: ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುವುದಾಗಿ ತಿಳಿಸಿದಾಗ ಮನೆಯಲ್ಲಿ ಅಷ್ಟು ದೂರ ಒಬ್ಬನೇ ಹೋಗುವುದು ಬೇಡ ಎಂದು ತಾಯಿ ನೀಲಾ ಅರ್ಕಾಟ್ ಹೇಳಿದರು. ಆದರೂ ಕೊನೆಗೆ, ಆ ದೇವರ ಇಚ್ಛೆಯಂತೆ ಆಗಲಿ ಎಂದು ಯಾತ್ರೆಗೆ ಕಳುಹಿಸಿಕೊಟ್ಟರು.ಡಿ.22ರಂದು ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ದರ್ಶನ ಪಡೆದು ಮಠದಿಂದ ಈ ಯಾತ್ರೆ ಪ್ರಾರಂಭಿಸಿದರು. ಊಟ, ವಸತಿ ಬಗ್ಗೆ ಚಿಂತಿಸದೆ, ಕೈಯಲ್ಲಿ ಕರ್ನಾಟಕ ಧ್ವಜ ಹಿಡಿದು, ಕೊರಳಿನಲ್ಲಿ ಕೇಸರಿ ಬಣ್ಣದ ಶಾಲು ಹಾಕಿಕೊಂಡು ನಡೆದು ನಡೆದು ಪಾದಗಳಲ್ಲಿ ಬೊಬ್ಬೆ ಬಂದು, ಆರೋಗ್ಯದಲ್ಲಿ ಏರುಪೇರಾದರೂ ಶ್ರೀರಾಮ ಜಪ ಮಾಡುತ್ತ, ಅಲ್ಲಲ್ಲಿ ಮಠ-ಮಂದಿರಗಳಲ್ಲಿ ನೀಡುವ ಪ್ರಸಾದ ಸೇವಿಸುತ್ತ ದೃಢ ಮನಸ್ಸಿನಿಂದ ಮುನ್ನಡೆದಿದ್ದಾರೆ.
ಸಾಗಿದ ಮಾರ್ಗ: ಹುಬ್ಬಳ್ಳಿಯಿಂದ ಹೊರಟವರು ನವಲಗುಂದ, ಬಾಗಲಕೋಟೆ, ವಿಜಯಪುರ ದಾಟಿ, ಮಹಾರಾಷ್ಟ್ರದ ನಾಗಪುರ, ಸೋಲಾಪುರ, ತುಳಜಾಪುರ, ಲಾಥೋರ್, ಯೋಥ್ಮಲಾ ಮೂಲಕ ಸಾಗಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶದ ಮೂಲಕ ಅಯೋಧ್ಯೆ ತಲುಪಲಿದ್ದಾರೆ. ಈ ವರೆಗೆ 1380 ಕಿಮೀ ನಡೆದಿದ್ದಾರೆ.
ತಮ್ಮ ಆಡುಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ನಿತ್ಯದ ಚಟುವಟಿಕೆ ವಿಡಿಯೋ ಪೋಸ್ಟ್ ಹಾಕುತ್ತಿದ್ದಾರೆ. ಈ ವಿಡಿಯೋ ತುಣುಕುಗಳನ್ನು ವೀಕ್ಷಿಸಿದ ಜನರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಗೆ ಗೊತ್ತಿಲ್ಲದ್ದ ಊರಿನಲ್ಲಿ ಶ್ರೀರಾಮ ಜಪ ಮಾಡಿ. ತನ್ನ ಪರಿಚಯ ಮಾಡಿಕೊಂಡು ಸಾಗುತ್ತಿರುವ ಯುವಕನ ನಡೆಗೆ ಜನರು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.