ಮಂತ್ರಾಲಯಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಕೊಡಗಿನ ಯುವಕನೊಬ್ಬ ಸೇರಿದಂತೆ ಮೂವರು ಸ್ನಾನಘಟ್ಟದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಗುರು ಶ್ರೀ ರಾಘವೇಂದ್ರ ಸ್ವಾಮಿಯ ಪುಣ್ಯ ಕ್ಷೇತ್ರ ಮಂತ್ರಾಲಯಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಕೊಡಗಿನ ಯುವಕನೊಬ್ಬ ಸೇರಿದಂತೆ ಮೂವರು ಸ್ನಾನಘಟ್ಟದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಈಚೆಗೆ ನಡೆದಿದೆ..ತಾಲೂಕಿನ ಸಂಗಯ್ಯನಪುರ ಗ್ರಾಮದ ಕೃಷಿಕ ರಮೇಶ್ ಹಾಗೂ ಇಂದಿರಾ ದಂಪತಿಗಳ ಪ್ರಥಮ ಪುತ್ರ ಕೆ.ಆರ್. ಅಜಿತ್ (20) ಮೃತಪಟ್ಟವರಾಗಿದ್ದಾರೆ. ಇವರು ಹಾಸನದ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಜು.11 ರಂದು ಹಾಸನದಿಂದ ಮಂತ್ರಾಲಯಕ್ಕೆ ಪ್ರವಾಸ ತೆರಳಿದ್ದ 7 ಮಂದಿ ಸ್ನೇಹಿತರ ತಂಡದೊಂದಿಗಿದ್ದ ಅಜಿತ್, ನಿನ್ನೆ ದಿನ ಮಂತ್ರಾಲಯದ ತುಂಗ ಭದ್ರಾ ನದಿಯ ಸ್ನಾನಘಟಕ್ಕೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಇಳಿದಿದ್ದು, ಆಕಸ್ಮಿಕವಾಗಿ ಆಯತಪ್ಪಿ ಮೂವರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಈಜುಗಾರರ ತಂಡ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಿಗ್ಗೆ ಎನ್.ಡಿ.ಆರ್.ಎಫ್. ತಂಡದೊಂದಿಗೆ ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮೃತದೇಹಗಳು ಪತ್ತೆಯಾಗಿವೆ. ಸೋಮವಾರಪೇಟೆಯ ಅಜಿತ್ ಸೇರಿದಂತೆ ಹಾಸನ ಅರಸೀಕೆರೆಯ ಪ್ರಮೋದ್, ಸಚಿನ್ ಅವರುಗಳ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಾಗಿದೆ.ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಹೆಚ್ಚಿನ ಮುತುವರ್ಜಿ ವಹಿಸಿ, ಉಸ್ತುವಾರಿ ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕಾರ‍್ಯಾಚರಣೆ ಚುರುಕುಗೊಳಿಸಲು ಸಹಕರಿಸಿದ್ದಾರೆ. ಮಂಗಳವಾರ ಸ್ವ ಗ್ರಾಮ ಸಂಗಯ್ಯನಪುರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ. ಮೃತ ಅಜಿತ್, ಪೋಷಕರೊಂದಿಗೆ ಇಬ್ಬರು ಸಹೋದರರನ್ನು ಅಗಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.