ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಒಂದೇ ಸೂರು ಸೇವೆ ನೂರು ಕಾರ್ಯಕ್ರಮ ಕನ್ನಡಪ್ರಭ ವಾರ್ತೆ, ಕಡೂರು ಆಧಾರ್ ಕಾರ್ಡ್‍ನಲ್ಲಿ ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಲು ಅಂಚೆ ಇಲಾಖೆಯಲ್ಲಿ ತಿದ್ದುಪಡಿಗೆ ಅವಕಾಶವಿದ್ದು, ಇದರ ಪ್ರಯೋಜನ ಪಡೆಯುವಂತೆ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ. ಸುಜಾತ ಸುವರ್ಣ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅಂಚೆ ಇಲಾಖೆ, ವಕೀಲರ ಸಂಘ, ಕಾನೂನು ಸೇವಾ ಸಮಿತಿ ಯಿಂದ ನಡೆದ ಒಂದೇ ಸೂರು ಸೇವೆ ನೂರು ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಧಾರ್ ಕಾರ್ಡ್‍ನ್ನು ಪ್ರತಿ 10 ವರ್ಷಕ್ಕೊಮ್ಮೆ ಬದಲಾಯಿಸಿಕೊಳ್ಳಬೇಕಿದೆ. ಎಲ್ಲಾ ಕೆಲಸಗಳಿಗೆ ಅಂಚೆ ಕಚೇರಿಗೆ ತೆರಳಿ ಕೆಲಸಗಳನ್ನು ಸಾರ್ವಜನಿಕರು ಪಡೆದುಕೊಳ್ಳುವುದು ಕಷ್ಟ. ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗಾಗಿ ಎಂಬ ಉದ್ದೇಶದಿಂದ ಕೋರ್ಟ್ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸ ಲಾಗಿದ್ದು, ಅಂಚೆ ಕಚೇರಿಯಿಂದ ಅಪಘಾತ ವಿಮೆ, ಜೀವವಿಮೆ ಸೇರಿದಂತೆ ಅನೇಕ ಯೋಜನೆಗಳು ಲಭಿಸಲಿದೆ. ಇದರ ಪ್ರಯೋಜನ ಪ್ರತಿಯೊಬ್ಬರಿಗೂ ಆಗಬೇಕಿದೆ ಎಂದರು. ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಎನ್. ರಮೇಶ್ ಮಾತನಾಡಿ, 165 ವರ್ಷಗಳ ಇತಿಹಾಸ ವಿರುವ ಅಂಚೆ ಇಲಾಖೆ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಕಂಡಿದೆ. ಹೊಸ ತಂತ್ರಜ್ಞಾನದೊಂದಿಗೆ ವಿನೂತನ ಯೋಜನೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ ವಿವಿಧ ಜನೋಪಯೋಗಿ ಸೇವೆಗಳನ್ನು ಒದಗಿಸುತ್ತಿದೆ. ವಿದೇಶಿಗಳಿಗೆ ಪತ್ರ ಪಾರ್ಸೆಲ್ ಕಳುಹಿಸಲು ‘ಡಾಕ್ ನಿರ್ಯಾತ್’ ಎಂಬ ಹೊಸ ಸೇವೆ ಆರಂಭಿಸಲಾಗಿದೆ. ವಿಶ್ವ ಅಂಚೆ ಸಪ್ತಾಹದ ಅಂಗವಾಗಿ ಇದೇ ತಿಂಗಳ 9 ರಿಂದ 13ರವರೆಗೆ ಒಂದೇ ಸೂರು ಸೇವೆ ನೂರು ಎಂಬ ಕಾರ್ಯಕ್ರಮ ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಂ.ಎನ್. ರಾಮ್‍ಪ್ರಶಾಂತ್, ಅಮ್ರಿನ್ ಸುಲ್ತಾನ್, ಸವಿತಾರಾಣಿ, ಖಲೀಲ್, ವಕೀಲರ ಸಂಘದ ಅಧ್ಯಕ್ಷ ತಿಪ್ಪೇಶ್, ಜಯಣ್ಣ, ಲತಾ, ಮಂಜುಳಾ, ಆನಂದ್, ಅಂಚೆ ಇಲಾಖೆಯ ಗಿರೀಶ್, ದೊಡ್ಡೇಶ್, ವೇಣುಗೋಪಾಲ್, ಮಂಜುನಾಥ್, ಕುಮಾರ್ ಮತ್ತಿತರಿದ್ದರು. 12ಕೆಡಿಯು2 ಕಡೂರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಒಂದೇ ಸೂರು ಸೇವೆ ನೂರು ಸೇವಾ ಕಾರ್ಯಕ್ರಮಕ್ಕೆ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ಸುಜಾತ ಸುವರ್ಣ ಚಾಲನೆ ನೀಡಿದರು. ನ್ಯಾಯಾಧೀಶರಾದ ಎಂ.ಎನ್.ರಾಮಪ್ರಶಾಂತ್, ಅಮ್ರಿನ್‍ಸುಲ್ತಾನ್, ಸವಿತಾರಾಣಿ, ತಿಪ್ಪೇಶ್ ಮತ್ತಿತರಿದ್ದರು.