10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ನವೀಕರಣ ಕಡ್ಡಾಯ: ಡಿಸಿ ಡಾ. ವಿದ್ಯಾಕುಮಾರಿ

KannadaprabhaNewsNetwork | Published : Dec 21, 2024 1:17 AM

ಸಾರಾಂಶ

ಜಿಲ್ಲೆಯಲ್ಲಿ ಈವರೆಗೆ 14,16,407 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 35,750, 5 ರಿಂದ 18 ವರ್ಷದವರು 2,07,021, 18 ವರ್ಷ ಮೇಲ್ಪಟ್ಟ 11,73,636 ಜನರು ಆಧಾರ್ ಕಾರ್ಡ್ ಅನ್ನು ಪಡೆದಿದ್ದಾರೆ. ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟವರು 38,680 ಜನರು, 15 ವರ್ಷ ಮೇಲ್ಪಟ್ಟ 38,188 ಜನ ಸೇರಿದಂತೆ ಒಟ್ಟು 76,868 ಜನರು ನವೀಕರಿಸಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ನಾಗರಿಕರು ಮೌಲ್ಯಯುತ ಆಧಾರ್ ಗುರುತಿನ ಚೀಟಿ ಹೊಂದುವುದು ಕಡ್ಡಾಯ. ಹೊಸ ನೋಂದಣಿ, ಮರು ನೋಂದಣಿ ಹಾಗೂ ಬಯೋ ಮೆಟ್ರಿಕ್ ನೀಡಿ, ಆಧಾರ್ ಗುರುತಿನ ಚೀಟಿ ಯಾವತ್ತೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು. ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಈವರೆಗೆ 14,16,407 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 35,750, 5 ರಿಂದ 18 ವರ್ಷದವರು 2,07,021, 18 ವರ್ಷ ಮೇಲ್ಪಟ್ಟ 11,73,636 ಜನರು ಆಧಾರ್ ಕಾರ್ಡ್ ಅನ್ನು ಪಡೆದಿದ್ದಾರೆ. ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟವರು 38,680 ಜನರು, 15 ವರ್ಷ ಮೇಲ್ಪಟ್ಟ 38,188 ಜನ ಸೇರಿದಂತೆ ಒಟ್ಟು 76,868 ಜನರು ನವೀಕರಿಸಿಕೊಳ್ಳಬೇಕಿದೆ.

5 ವರ್ಷದೊಳಗಿನ ಮಕ್ಕಳು ಹೊಸದಾಗಿ ಆಧಾರ್ ಕಾರ್ಡ್ ನೋಂದಣಿಯನ್ನು ಸಮೀಪದ ಅಂಚೆ ಕಚೇರಿ, ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಆಯ್ದ ಬ್ಯಾಂಕ್‌ಗಳು, ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕಚೇರಿ ಸಮಯದಲ್ಲಿ ಸಾರ್ವಜನಿಕರು ಆಧಾರ್ ಸೇವೆಯನ್ನು ಪಡೆಯಬಹುದಾಗಿದೆ ಎಂದರು.

10 ವರ್ಷಗಳ ಹಿಂದೆ ಆಧಾರ್ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರು ಗುರುತಿನ ಹಾಗೂ ವಿಳಾಸ ದಾಖಲೆಯನ್ನು ಸಮೀಪದ ಆಧಾರ್ ಕೇಂದ್ರದಲ್ಲಿ ಅಪ್ಲೋಡ್ ಮಾಡಿ ಮರುನೊಂದಣಿ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಆಧಾರ್ ಬಯೋಮೆಟ್ರಿಕ್ ನವೀಕರಣ ಮಾಡಿಸಿಕೊಳ್ಳಬೇಕು. ಇದು ಕಡ್ಡಾಯವಾಗಿದೆ. ಆನ್‌ಲೈನ್ ಮೂಲಕವಾಗಿ ನೇರವಾಗಿ ನವಿಕರಿಸಲು ಅವಕಾಶವಿದೆ ಎಂದರು

ಒಂದೊಮ್ಮೆ ನವೀಕರಿಸದೆ ಇದ್ದಲ್ಲಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಸೌಲಭ್ಯ ಅಥವಾ ಸೇವೆ ಪಡೆಯಲು ಅನನುಕೂಲವಾಗುತ್ತದೆ ಎಂದರು.

ಹೊರದೇಶಗಳಿಂದ ಬಂದವರು ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಆಧಾರ್ ನೋಂದಣಿಗೆ ಮುಂದಾಗುವ ಸಾಧ್ಯತೆ ಗಳಿರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದ ಅವರು, ಕೆಲವರು ನಕಲಿ ಆಧಾರ್ ಪ್ರತಿಗಳನ್ನು ಹೊಂದಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿರುತ್ತವೆ. ಇವುಗಳ ಬಗ್ಗೆ ಪರಿಶೀಲನೆಯನ್ನು ಆಗಿಂದಾಗ್ಗೆ ಮಾಡಬೇಕು ಎಂದರು.

ಸಭೆಯಲ್ಲಿ ಯು.ಐ.ಡಿ.ಎ.ಐ. ಡೈರೆಕ್ಟರ್ ಮನೋಜ್ ಕುಮಾರ್, ಯು.ಐ.ಡಿ.ಎ.ಐ ಅಸಿಸ್ಟೆಂಟ್ ಮ್ಯಾನೆಜರ್ ಮೊಹಮ್ಮದ್ ಮೂಸಾಬ್, ಡಿಡಿಪಿಯು ಗಣಪತಿ, ಡಿಡಿಪಿಐ ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ, ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this article