ಕುಷ್ಟಗಿ: ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದ್ದರೂ, ಆಧಾರ್ ಬಯೋಮೆಟ್ರಿಕ್ ಸೇವೆ ಸ್ಥಗಿತಗೊಂಡಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ನೂರಾರು ಸಾರ್ವಜನಿಕರು ಪರದಾಡುವಂತಾಗಿದೆ.
ಆಹಾರ ಇಲಾಖೆಯ ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅ. 20 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಬಯೋಮೆಟ್ರಿಕ್ ಮಾಡಿಸಿಕೊಳ್ಳಲು ನಾಡಕಚೇರಿಗೆ ಬರುತ್ತಿದ್ದಾರೆ. ಆದರೆ, ಆಧಾರ್ ಆಪರೇಟರ್ ಸಿಬ್ಬಂದಿಯು ಹೆರಿಗೆ ರಜೆಯಲ್ಲಿರುವ ಕಾರಣ ಸೇವೆ ಸ್ಥಗಿತಗೊಳಿಸಲಾಗಿದೆ ಎಂಬ ನಾಮಫಲಕ ಕಚೇರಿಯಲ್ಲಿ ಹಾಕಲಾಗಿದೆ. ಇದರಿಂದ ದೂರದ ಊರುಗಳಿಂದ ಬರುವ ಸಾರ್ವಜನಿಕರು ನಿರಾಸೆಯಿಂದ ಹಿಂದಿರುಗುವಂತಾಗಿದೆ.
ಆಪರೇಟರ್ ಹೆರಿಗೆ ರಜೆಗೆ ತೆರಳುವ ವಿಚಾರ ಮುಂಚಿತವಾಗಿಯೇ ತಿಳಿದಿದ್ದರೂ, ಪರ್ಯಾಯ ಆಪರೇಟರ್ ನಿಯೋಜಿಸಿ ಸೇವೆ ಮುಂದುವರಿಸಲು ಸಂಬಂಧಿಸಿದ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ರೇಷನ್ ಕಾರ್ಡ್ ಇ-ಕೆವೈಸಿಗೆ ಕೊನೆಯ ದಿನಾಂಕ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಧಾರ್ ಬಯೋಮೆಟ್ರಿಕ್ ಸೇವೆ ಸ್ಥಗಿತಗೊಂಡಿರುವುದು ಮಕ್ಕಳಿಗೆ ಹಾಗೂ ಪೋಷಕರಿಗೆ ಮತ್ತಷ್ಟು ತೊಂದರೆ ಉಂಟುಮಾಡಿದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಕಚೇರಿಗೆ ಬರುವ ಪೋಷಕರು ಕೆಲಸವಾಗದೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇ-ಕೆವೈಸಿಗೆ ಕೊನೆಯ ದಿನಾಂಕ ನಿಗದಿಯಾಗಿರುವುದು ಗೊತ್ತಿದ್ದರೂ, ಬಯೋಮೆಟ್ರಿಕ್ ಸೇವೆ ಲಭ್ಯವಿಲ್ಲದಿದ್ದರೆ ನಾವು ಏನು ಮಾಡಬೇಕು? ಮಕ್ಕಳನ್ನು ಕರೆದುಕೊಂಡು ಬಂದು ಬರಿಗೈಯಲ್ಲಿ ಹಿಂದಿರುಗಬೇಕಾಗಿದೆ. ಅಧಿಕಾರಿಗಳು ಕೂಡಲೇ ಪರ್ಯಾಯ ಆಪರೇಟರ್ ನಿಯೋಜಿಸಿ ಸೇವೆ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಮಸ್ಯೆ ನಿವಾರಣೆಗೆ ಕ್ರಮ: ಆಧಾರ್ ನೋಂದಣಿ ಆಪರೇಟರ್ ನಾಲ್ಕು ದಿನಗಳ ಹಿಂದೆ ಹೆರಿಗೆ ರಜೆಗೆ ಹೋದ ಹಿನ್ನೆಲೆಯಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿದೆ. ಈ ಕುರಿತು ಈಗಾಗಲೆ ತಹಸೀಲ್ದಾರ್ ಅವರ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲಿ ಸಮಸ್ಯೆ ನಿವಾರಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಾವರಗೇರಾ ನಾಡಕಾರ್ಯಾಲಯದ ಉಪತಹಸೀಲ್ದಾರ್ ರೇಣುಕಾ ಹೇಳಿದರು.