ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಅವರಿಗೆ ಬೆಂಬಲ ನೀಡುವುದಾಗಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ ರೆಡ್ಡಿ ಅವರು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ನಗರದ ಅನೇಕ ಸಮಸ್ಯೆಗಳಿಗೆ ಈ ಹಿಂದೆ ಹೋರಾಟಗಳನ್ನು ನಡೆಸಿ, ಜನಮುಖಿಯಾಗಿದವರು. ಇವರ ಹೋರಾಟದ ಹಿನ್ನಲೆ ಹಾಗೂ ಸಮಾಜಸೇವಾ ಕಾರ್ಯವನ್ನು ಪರಿಗಣಿಸಿ, ಪಕ್ಷದ ಕೇಂದ್ರ ಸಮಿತಿ ಸೂಚನೆಯಂತೆ ನಾರಾ ಪ್ರತಾಪ ರೆಡ್ಡಿ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈಶಾನ್ಯ ಪದವೀಧರ ಕ್ಷೇತ್ರದ 7 ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಾಪ ರೆಡ್ಡಿ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.ಪಾಟೀಲ್ ಪರ ಸಿಎಂ ಕ್ಷಮೆಯಾಚಿಸಲಿ: ಬೆಳೆಸಾಲ ಮನ್ನಾ, ಬೆಳೆ ಪರಿಹಾರದ ಹಣಕ್ಕಾಗಿ ರೈತರು ಬರಗಾಲ ಬಯಸುತ್ತಾರೆ ಎಂದಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಹೇಳಿಕೆ ಅತ್ಯಂತ ಖಂಡನೀಯ. ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿರುವ ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅಷ್ಟೇ ಅಲ್ಲ; ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಪಾಟೀಲ್ ಪರವಾಗಿ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಆಮ್ ಆದ್ಮಿ ಪಕ್ಷ ಅಂತರ ಕಾಯ್ದುಕೊಳ್ಳುತ್ತದೆ. ಚುನಾವಣೆ ಸಂದರ್ಭದಲ್ಲಿ ವಿಷಯಾಧಾರಿತ ಬೆಂಬಲವಷ್ಟೇ ನೀಡುತ್ತದೆ. ಸಂವಿಧಾನ ಉಳಿವು, ದೇಶದ ಹಿತದ ವಿಚಾರ ಬಂದಾಗ ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಅನಿವಾರ್ಯವಾಗಲಿದೆ ಎಂದರು.ಐಎನ್‌ಡಿಐಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಂಬಿಸಿರುವುದನ್ನು ಸ್ವಾಗತಿಸುತ್ತೇವೆ. ಅನುಭವಿ ರಾಜಕೀಯ ಮುತ್ಸದ್ಧಿಯಾಗಿರುವ ಖರ್ಗೆ ಅವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಸಿಗುವಂತಾಗಲಿ ಎಂದರು.
ಜಿಲ್ಲೆಗೆ ದರ್ಶನ ನೀಡದ ಶಾಸಕ: ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಮಾತನಾಡಿ, ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ನನಗೆ ಬೆಂಬಲ ವ್ಯಕ್ತವಾಗಿದೆ. ಪಕ್ಷಾತೀತವಾಗಿ ಅನೇಕ ನಾಯಕರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರಲ್ಲದೆ, ಕಳೆದ ಬಾರಿ ಈಶಾನ್ಯ ಪದವೀಧರ ಕ್ಷೇತ್ರದಿಂದ ಗೆದ್ದು ಶಾಸಕನಾಗಿದ್ದ ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್ ಅವರು ಜಿಲ್ಲೆಗೆ ಈವರೆಗೆ ದರ್ಶನ ನೀಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು. ಆಮ್ ಆದ್ಮಿ ಪಕ್ಷದ ಮುಖಂಡ ಕೊರಲಗುಂದಿ ಕೇಶವರೆಡ್ಡಿ, ಜಿಲ್ಲಾಧ್ಯಕ್ಷ ಜೆ.ವಿ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.ರೈತರ ಮಕ್ಕಳ ಮದುವೆಯಾದರೆ ಸಬ್ಸಿಡಿ ಕೊಡಲಿ
ರೈತರ ಮಕ್ಕಳಿಗೆ ಹೆಣ್ಣು ಕೊಡುವವರಿಗೆ ₹5 ಲಕ್ಷದವರೆಗೆ ಸಬ್ಸಿಡಿ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡ ಯುವಕರಿಗೆ ಹೆಣ್ಣು ನೀಡುತ್ತಿಲ್ಲ. ಹೀಗಾದರೆ ಕೃಷಿ ಮಾಡುವವರು ಯಾರು ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರವೇ ದಾರಿ ಹುಡುಕಬೇಕು. ರೈತರ ಮಕ್ಕಳಿಗೆ ಹೆಣ್ಣು ಕೊಡುವವರಿಗೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.