ವಿಶೇಷ ವರದಿ
ಕನ್ನಡಿಗರ ಜೀವನಾಡಿಯೂ, ಬದುಕಿನ ಬಾವನಾಡಿಯೂ ಆಗಿರುವ ದಕ್ಷಿಣ ಗಂಗೆ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ ಮಾತೆಗೆ ಆರತಿ ಮಾಡುವ ಹೊಸ ಧಾರ್ಮಿಕ ಸಂಪ್ರದಾಯಕ್ಕೆ ಸರ್ಕಾರ ಮುಂದಾಗಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಕಾವೇರಿಯನ್ನು ಹಳೇ ಮೈಸೂರು ಪ್ರಾಂತ್ಯದ ಜನ ವಿಶೇಷವಾಗಿ ರೈತರು ಬಹುಕಾಲದಿಂದಲೂ ತಮ್ಮ ಬದುಕಿನ ಭಾಗವಾಗಿ, ಅನ್ನದ ಹಸಿರಾಗಿ ಕಂಡುಕೊಂಡು ಬಂದಿದ್ದು, ಇದನ್ನು ಧಾರ್ಮಿಕ ಶಕ್ತಿಯಾಗಿ ಪರಿವರ್ತಿಸುವ ಮತ್ತು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ನಡೆದಂತೆ ಕಂಡುಬರುತ್ತಿವೆ.ಈ ಹಿಂದಿನ ಬಿಜೆಪಿ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಮತದ ಉದ್ದೇಶವನ್ನಿಟ್ಟುಕೊಂಡು ಮಹದೇಶ್ವರ ಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿ ರಾಜಕೀಯವಾದ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿ ವಿಫಲವಾದ ಬೆನ್ನಲ್ಲೇ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೂಡ ಸ್ಥಳೀಯವಾಗಿ ಕಾವೇರಿ ಆರತಿಯ ಮೂಲಕ ಹೊಸ ಧಾರ್ಮಿಕ ಪರಂಪರೆ ಹುಟ್ಟುಹಾಕಿ ಮಂಡ್ಯ ಮತ್ತಿತರ ಜಿಲ್ಲೆಯ ಜನರನ್ನು ಸೆಳೆಯುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.ಕಳೆದ ಕೆಲವು ವರ್ಷಗಳಿಂದಲೂ ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಶಾಶ್ವತಿ ಧಾರ್ಮಿಕ ಸಮಿತಿ ಮಾತ್ರವೇ ಕಾವೇರಿ ಆರತಿಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಉತ್ತರದ ಗಂಗಾರತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡ ನಂತರ ದಕ್ಷಿಣ ಗಂಗೆಯಾದ ಕಾವೇರಿ ಆರತಿ ನಡೆಸುವ ಬಗ್ಗೆ ಸ್ಥಳೀಯ ಪ್ರತಿನಿಧಿಗಳು ಹೆಚ್ಚು ಆಸಕ್ತಿಯನ್ನು ವಹಿಸುತ್ತಿರುವುದು ಮೇಲ್ನೋಟಕ್ಕೆ ಸರಿ ಎನಿಸಿದರೂ, ವಾಸ್ತವವಾಗಿ ಶುದ್ಧ ಕಾವೇರಿ ದಿನದಿಂದ ದಿನಕ್ಕೆ ವಿಷಯುಕ್ತ ವಸ್ತುಗಳಿಂದ ಮಲಿನಗೊಳ್ಳುತ್ತಾ ತನ್ನ ಪಾವಿತ್ರತೆಯನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಗಂಭೀರ ಚಿಂತನೆ ನಡೆಸಿ ಗಂಗಾಶುದ್ಧಿಯ ಮಾದರಿಯಲ್ಲೇ ಕಾವೇರಿ ಶುದ್ಧಿಯ ಪ್ರಕ್ರಿಯೆಯನ್ನು ಆರಂಭಿಸದಿರುವುದು ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ.ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿಯನ್ನು ಸರ್ಕಾರ ನಡೆಸುವುದರ ಬಗ್ಗೆ ಸಾರ್ವಜನಿಕವಾಗಿ ಹರ್ಷ ವ್ಯಕ್ತವಾಗಿದ್ದರೂ, ಮೂಲಭೂತವಾಗಿ ಕಾವೇರಿ ಸ್ವಚ್ಚತೆ ನೀರಿನ ಜಾಗೃತಿ, ನೀರಿನ ಬಳಕೆ ಇಂತಹ ಕಾರ‌್ಯಕ್ರಮಗಳ ಬಗ್ಗೆ ಮುತುವರ್ಜಿ ವಹಿಸದೆ ಕೇವಲ ಸಾಂಕೇತಿಕ ಆರತಿಗಳ ಮೂಲಕ ಜನಮನ ಸೆಳೆಯುವ ಪ್ರಯತ್ನಗಳನ್ನು ನಡೆಸುತ್ತಿರುವುದೂ ಕೂಡ ನಾಗರೀಕರ ಆಕ್ಷೇಪಕ್ಕೆ ಕಾರಣವಾಗಿದೆ.
ಮೈಸೂರಿನಿಂದ ಶ್ರೀರಂಗಪಟ್ಟಣ ಸೇರುವ ನಾಲೆಗಳ ಮೂಲಕವೂ ತ್ಯಾಜ್ಯಯುಕ್ತ ರಾಸಾಯನಿಕ ವಸ್ತುಗಳು, ಕಸ ಸೇರಿದಂತೆ ಇನ್ನಿತರ ಕಲ್ಮಶಗಳು ನದಿಯ ಒಡಲು ಸೇರುತ್ತಿವೆ. ಎಲ್ಲೂ ಸಹ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿರುವುದು ಕಂಡುಬರುವುದೇ ಇಲ್ಲ. ಈ ತ್ಯಾಜ್ಯ ನೀರನ್ನು ಸಂಸ್ಕರಿಸಿ ನದಿಗೆ ಬಿಡುವಂತೆ ಮಾಡುವುದಕ್ಕೆ ಸರ್ಕಾರ ಮುತುವರ್ಜಿ ವಹಿಸಬೇಕು. ಎಲ್ಲೆಲ್ಲಿಂದ ಕಾವೇರಿ ನದಿಗೆ ತ್ಯಾಜ್ಯ ನೀರು ಸೇರುತ್ತಿದೆ ಎಂಬ ಬಗ್ಗೆ ಸ್ಥಳ ಗುರುತಿಸಿ ಅಲ್ಲಿ ಸಂಸ್ಕರಣೆ ಮಾಡುವುದಕ್ಕೆ ಯೋಜನೆಗಳನ್ನು ಕೈಗೆತ್ತಿಕೊಂಡು ನದಿ ಮಲಿನಗೊಳ್ಳುವುದನ್ನು ತಡೆಯುವುದಕ್ಕೆ ಮೊದಲ ಪ್ರಾಧಾನ್ಯತೆ ನೀಡುವುದು ಪ್ರಸ್ತುತ ಹೆಚ್ಚು ಅವಶ್ಯ ಎನ್ನುವುದು ಜನರ ಅಭಿಮತವಾಗಿದೆ.ಕಾರ್ತೀಕ ಮಾಸದಲ್ಲಿ ಕಾವೇರಿ ಆರತಿ?
ಶ್ರೀರಂಗಪಟ್ಟಣ ದಸರಾ ಸಮಯದಲ್ಲಿ ಸಾಂಕೇತಿಕವಾಗಿ ಆರು ದಿನಗಳ ಕಾಲ ನಡೆದ ಕಾವೇರಿ ಆರತಿ ಸರ್ಕಾರದ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮವಾಗಿರಲಿಲ್ಲ. ಅದು ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ನಡೆಸಿದ ಕಾರ್ಯಕ್ರಮವಾಗಿತ್ತು. ಈ ಸಮಿತಿ ಕಳೆದ ಹಲವು ವರ್ಷಗಳಿಂದ ಕಾವೇರಿ ಆರತಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ದಸರಾ ವೇಳೆ ಕಾರ್ಯಕ್ರಮ ಆಯೋಜಿಸದೆ ತುಲಾ ಮಾಸದಲ್ಲಿ ನಡೆಸುತ್ತಿದ್ದರು. ಈ ಬಾರಿ ಜಿಲ್ಲಾಡಳಿತದ ಕೋರಿಕೆ ಮೇರೆಗೆ ದಸರಾ ಸಮಯದಲ್ಲಿ ಆಯೋಜಿಸಿದ್ದರೂ ಜಿಲ್ಲಾಡಳಿತದಿಂದ ಪೂರಕ ಸಹಕಾರ ದೊರೆಯಲೇ ಇಲ್ಲ.ಜನರಲ್ಲಿ ಪೂಜನೀಯ ಭಾವನೆ ಇಲ್ಲ:
ನಿರಂತತೆ ಕಾಯ್ದುಕೊಂಡರೆ ನಂತರದ ದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುವುದು ಎನ್ನುವುದು ಹಲವರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯವಾಗಿದೆ.ಕಾವೇರಿ ಆರತಿ ನಡೆಸುವ ಶ್ರೀರಂಗಪಟ್ಟಣದ ಸ್ನಾನಘಟ್ಟವನ್ನು 50 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಶ್ರೀರಂಗನಾಥಸ್ವಾಮಿ ಪಾದ ತೊಳೆದ ನೀರು ಅಲ್ಲಿ ಸೇರುವುದರಿಂದ ಆ ಪವಿತ್ರ ಜಾಗವನ್ನೇ ಕಾವೇರಿ ಆರತಿಗೆ ಆಯ್ಕೆ ಮಾಡುವುದಕ್ಕೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಕಾವೇರಿ ಆರತಿಗೂ ಮುನ್ನ ಕಾವೇರಿ ನದಿಯನ್ನು ಶುದ್ಧೀಕರಣ ಮಾಡುವುದು ಸೂಕ್ತ. ತೀರ್ಥರೂಪಿಣಿ, ದಕ್ಷಿಣ ಗಂಗೆ ಎಂದೆಲ್ಲಾ ಕರೆಯಲ್ಪಡುತ್ತಿದ್ದರೂ ಈ ಭಾಗದ ಜನರಿಗೆ ನದಿಯ ಬಗ್ಗೆ ಪೂಜನೀಯ ಭಾವನೆ ಇಲ್ಲ. ಅದರಿಂದಾಗಿಯೇ ತ್ಯಾಜ್ಯವೆಲ್ಲವೂ ಕಾವೇರಿ ಒಡಲನ್ನು ನಿರಾತಂಕವಾಗಿ ಸೇರುತ್ತಿದೆ. ಕಾವೇರಿ ಆರತಿ ಎಷ್ಟು ಅಗತ್ಯವೋ ನದಿಯ ಸ್ವಚ್ಛತೆ, ಶುದ್ಧೀಕರಣ ಅದಕ್ಕಿಂತ ಹೆಚ್ಚು ಅವಶ್ಯ.