ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ

| N/A | Published : Oct 31 2025, 08:38 AM IST

DK Shivakumar
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, ''''ಬಿ'''' ಖಾತೆಯಿಂದ ''''ಎ'''' ಖಾತೆ ನೀಡುವ ಯೋಜನೆಗಳ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ರಾಜ್ಯದ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇವೆ.  ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

 ಬೆಂಗಳೂರು :  ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, ''''ಬಿ'''' ಖಾತೆಯಿಂದ ''''ಎ'''' ಖಾತೆ ನೀಡುವ ಯೋಜನೆಗಳ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ರಾಜ್ಯದ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇವೆ. ಯಾವುದೇ ಹಣ ಬಿಡುಗಡೆ ಬಗ್ಗೆ ಭರವಸೆ ನೀಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ರಾಜ್ಯದಲ್ಲಿನ ನಗರೀಕರಣ ಪ್ರಕ್ರಿಯೆ ಸುಧಾರಣೆಗಳು, ಸ್ಥಳೀಯ ಸಂಸ್ಥೆಗಳ ಆಡಳಿತ, ಜಿಬಿಎ ರಚನೆ ಮತ್ತಿತರ ವಿಚಾರಗಳ ಬಗ್ಗೆ ತಿಳಿಸಲಾಯಿತು. 

ಅಭಿವೃದ್ಧಿ ವಿಚಾರವಾಗಿಯೂ ತಿಳಿಸಿದ್ದೇವೆ

ಕೇವಲ ಬೆಂಗಳೂರು ವಿಚಾರ ಮಾತ್ರವಲ್ಲ. ರಾಜ್ಯದ ಎಲ್ಲ ನಗರ, ಪಟ್ಟಣ, ಪಾಲಿಕೆಗಳ ಅಭಿವೃದ್ಧಿ ವಿಚಾರವಾಗಿಯೂ ತಿಳಿಸಿದ್ದೇವೆ. ಬೆಂಗಳೂರಿಗೆ ತನ್ನದೇ ಆದ ಮಹತ್ವವಿದೆ, ಇದು ಗ್ಲೋಬಲ್ ಸಿಟಿ ಎಂದು ಪ್ರಧಾನಿಯವರ ಮಾತನ್ನೇ ಕೇಂದ್ರ ಸಚಿವರು ಪುನರುಚ್ಛರಿಸಿದ್ದಾರೆ.‌ ಈ ಹಿಂದೆ ನಗರ ಪ್ರದೇಶಗಳಿಗೆ ಕೇಂದ್ರದಿಂದ ಹಲವಾರು ಯೋಜನೆಗಳಿದ್ದವು. ಈಗ ಅವುಗಳನ್ನು ನಿಲ್ಲಿಸಲಾಗಿದೆ. ಈ ಬಗ್ಗೆಯೂ ಕೇಂದ್ರ ಸಚಿವರ ಗಮನ ಸೆಳೆದಿದ್ದೇವೆ. 15 ನೇ ಹಣಕಾಸು ಯೋಜನೆ ಅನ್ವಯ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. 16 ನೇ ಹಣಕಾಸು ಯೋಜನೆ ಅನ್ವಯ ಅನುದಾನಕ್ಕಾಗಿ ಬೇಡಿಕೆ ಮುಂದಿಟಿದ್ದೇವೆ ಎಂದರು.

ಸುರಂಗ ರಸ್ತೆ ವಿರೋಧಿಸಿ ನಾಡಿದ್ದು

ಬಿಜೆಪಿ ಪ್ರತಿಭಟನೆ: ಆರ್‌.ಅಶೋಕ್‌ 

ಸುರಂಗ ರಸ್ತೆ ಯೋಜನೆಯನ್ನು ವಿರೋಧಿಸಿ ಲಾಲ್‌ಬಾಗ್‌ನಲ್ಲಿ ನ.2 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಯ ಹೆಸರು ಕೇಳಿದರೆ ಜನರು ಭೀತಿಗೊಳ್ಳುತ್ತಿದ್ದಾರೆ. ಎಲ್ಲಿ ಯಾರ ಮನೆ ನೆಲಸಮವಾಗಲಿದೆ ಎಂದು ತಿಳಿಯುತ್ತಿಲ್ಲ. ಆದ್ದರಿಂದ ‘ಲಾಲ್‌ಬಾಗ್‌ ಉಳಿಸಿ-ಬೆಂಗಳೂರು ರಕ್ಷಿಸಿ’ ಎಂಬ ಘೋಷಣೆಯಡಿ ಭಾನುವಾರ ಬೆಳಗ್ಗೆ 8 ಗಂಟೆಗೆ ಲಾಲ್‌ಬಾಗ್‌ನಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ನಗರದ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಎಲ್ಲ ಶಾಸಕರು ಸಭೆ ಸೇರಿ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ ಅವಧಿಯಲ್ಲಿ ರಸ್ತೆ ದುರಸ್ತಿಗೆ 8 ಸಾವಿರ ಕೋಟಿ ರು. ಅನುದಾನ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಹೊಸ ರಸ್ತೆ ನಿರ್ಮಿಸಬೇಕಿದೆ. ಲಾಲ್‌ಬಾಗ್‌ನಲ್ಲಿ 6 ಎಕರೆ ಜಮೀನು ಕಬಳಿಕೆ ಮಾಡಿ ಯೋಜನೆ ಮಾಡಲಾಗುತ್ತದೆ. ಇದಕ್ಕೆ ಯಾವ ಇಲಾಖೆಯೂ ಅನುಮತಿ ನೀಡಿಲ್ಲ. ಬಿಹಾರ ಚುನಾವಣೆಗೆ ಹಣ ಮಾಡಲು ಈ ಯೋಜನೆ ಜಾರಿ ಮಾಡುತ್ತಿರಬಹುದು ಎಂದು ಆರೋಪಿಸಿದರು.

ಸಂಸದ ತೇಜಸ್ವಿ ಸೂರ್ಯ ಅವರನ್ನು ಅವಹೇಳನ ಮಾಡುವುದು ತಪ್ಪು. ಇದು ಒಂದು ಲೋಕಸಭಾ ಕ್ಷೇತ್ರಕ್ಕೆ ಮಾಡುವ ಅಪಮಾನ. ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಗೌರವ ಕೊಟ್ಟು ಮಾತನಾಡುವುವುದನ್ನು ಕಲಿಯಲಿ ಎಂದು ಒತ್ತಾಯಿಸಿದರು.

ಧರ್ಮಸ್ಥಳ ಕುರಿತು ಅಪಪ್ರಚಾರ:

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿರುವುದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಅಪಪ್ರಚಾರ ಮಾಡಿರುವವರಿಗೆ ಶಿಕ್ಷೆಯಾಗಬೇಕು. ಅದಕ್ಕಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಎಸ್‌ಐಟಿ ರಚಿಸುವುದನ್ನು ಅವರು ಮೊದಲೇ ತಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ನಿವೇಶನ, ಖಾತಾಗೆ ಸಂಬಂಧಿಸಿದಂತೆ ವಸೂಲಿ ಮಾಡಲಾಗುತ್ತಿದೆ. ಒಸಿ, ಸಿಸಿಗೆ ಕಮಿಶನ್‌ ನಿಗದಿಯಾಗಿದೆ. ಅಭಿವೃದ್ಧಿ ಶುಲ್ಕವನ್ನು 4 ರಿಂದ 5 ಲಕ್ಷ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಕರ್ನಾಟಕವೆಂದರೆ ಕಲೆಕ್ಷನ್‌ ಸೆಂಟರ್‌ ಆಗಿದೆ ಎಂದು ಟೀಕಿಸಿದರು.

Read more Articles on