ಮೌಢ್ಯ ಪ್ರತಿಬಂಧಕ ಕಾಯ್ದೆ ವಿಫಲ : ಸಿಎಂ

| N/A | Published : Oct 31 2025, 08:28 AM IST

CM Siddaramaiah

ಸಾರಾಂಶ

ಸಮಾಜದಲ್ಲಿನ ಅಸಮಾನತೆ, ದ್ವೇಷ ತೊಡೆದು ಹಾಕಲು ಸರ್ಕಾರ ಮಾಡುವ ಕಾನೂನುಗಳು ಸಮರ್ಪಕವಾಗಿ ಜಾರಿಗೊಳ್ಳಬೇಕು. ಈ ಹಿಂದೆ ಮೌಢ್ಯ ಪ್ರತಿಬಂಧಕ ಕಾಯ್ದೆ ರೂಪಿಸಿದೆವು. ಆದರೆ, ಮೌಢ್ಯದ ವಿರುದ್ಧ ಇರಬೇಕಾದವರೇ ಅದನ್ನು ಪಾಲಿಸುವುದು ಮುಂದುವರಿಸಿದ್ದರಿಂದ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ 

  ಬೆಂಗಳೂರು :  ಸಮಾಜದಲ್ಲಿನ ಅಸಮಾನತೆ, ದ್ವೇಷ ತೊಡೆದು ಹಾಕಲು ಸರ್ಕಾರ ಮಾಡುವ ಕಾನೂನುಗಳು ಸಮರ್ಪಕವಾಗಿ ಜಾರಿಗೊಳ್ಳಬೇಕು. ಈ ಹಿಂದೆ ಮೌಢ್ಯ ಪ್ರತಿಬಂಧಕ ಕಾಯ್ದೆ ರೂಪಿಸಿದೆವು. ಆದರೆ, ಮೌಢ್ಯದ ವಿರುದ್ಧ ಇರಬೇಕಾದವರೇ ಅದನ್ನು ಪಾಲಿಸುವುದು ಮುಂದುವರಿಸಿದ್ದರಿಂದ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಗುರುವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನೂರು ಕಾನೂನುಗಳು-ನೂರು ಅಭಿಮತಗಳು’ ಮೂರು ಸಂಪುಟಗಳ ಲೋಕಾರ್ಪಣೆ ಮತ್ತು ಕಾನೂನು ಸಂಶೋಧಕರು, ತಜ್ಞರು ಮತ್ತು ಪ್ರವರ್ತಕರು ರಚಿಸಿದ 105 ಕರಡು ಮಾದರಿ ಮಸೂದೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಜನಪರವಾಗಿ, ಜನರ ಸಮಸ್ಯೆ ನಿವಾರಣೆಗಾಗಿ ಸರ್ಕಾರ ರೂಪಿಸುವ ಕಾನೂನು ಸಮರ್ಪಕ ಜಾರಿ ಬಹಳ ಮುಖ್ಯ, ಯಾವುದೇ ಕಾನೂನು ಸಮರ್ಪಕವಾಗಿ ಜಾರಿಯಾಗದಿದ್ದರೆ, ಜನರಲ್ಲಿ ಜಾಗೃತಿ ಮೂಡದಿದ್ದರೆ ಕಾಯ್ದೆ ಜಾರಿಗೆ ಅರ್ಥವಿರುವುದಿಲ್ಲ ಎಂದರು.

ಜಾತಿ, ಧರ್ಮಗಳ ನಡುವೆ ಸಹಬಾಳ್ವೆ ಇರಬೇಕು ಎಂಬುದು ಸಂವಿಧಾನದ ಪ್ರಮುಖ ಉದ್ದೇಶದಂತೆ ಕಾಯ್ದೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಆದರೆ ಸಮಾಜ ಒಡೆಯುವ, ದ್ವೇಷ ಹೆಚ್ಚಿಸುವ ಭಾಷಣ ಮಾಡುವವರನ್ನು ಹತ್ತಿಕ್ಕಲಾಗುತ್ತಿಲ್ಲ. ಸಹಿಷ್ಣುತೆ ಇಲ್ಲದಂತಾಗಿದೆ. ಸಂವಿಧಾನದ ಆಶಯ ಈಡೇರದೆ, ಅದಕ್ಕೆ ಪೂರಕವಾಗಿ ರೂಪಿಸಿರುವ ಕಾಯ್ದೆ ಸಮರ್ಪಕ ಅನುಷ್ಠಾನಗೊಳ್ಳದಿದ್ದರೆ ನಮಗೆ ಸಿಕ್ಕಿರುವ ಸ್ವಾತಂತ್ರ್ಯದ ಸೌಧ ಧ್ವಂಸವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

2 ವರ್ಷ, 100 ಕಾಯ್ದೆ ಅನುಷ್ಠಾನ-ಎಚ್‌.ಕೆ.:

ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ 100ಕ್ಕೂ ಹೆಚ್ಚಿನ ಕಾಯ್ದೆಯನ್ನು ರೂಪಿಸಿ, ಅನುಷ್ಠಾನಗೊಳಿಸಲಾಗಿದೆ. ಇಡೀ ದೇಶದಲ್ಲಿ ಇಷ್ಟು ಪ್ರಮಾಣದ ಮಸೂದೆಗಳನ್ನು ಮಂಡಿಸಿ, ಅನುಷ್ಠಾನ ಮಾಡಿರುವುದು ಇದೇ ಮೊದಲು. ಹಲವು ಕಾನೂನುಗಳಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ನಾಗರಿಕ ಕಾರ್ಯವಿಧಾನ ಸಂಹಿತೆ ಕಾಯ್ದೆಗೆ ಎರಡು ಬಾರಿ ತಿದ್ದುಪಡಿ ತರಲಾಗಿದೆ. ಇದರಿಂದ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್‌ವರೆಗೆ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕಾರಿಯಾಗಿದೆ. ಜನಸಾಮಾನ್ಯರು ನ್ಯಾಯಾಲಯಗಳಿಗೆ ಅಲೆಯುವ ಸಮಯ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಜನರನ್ನು ಕಾಪಾಡುವ ಸಲುವಾಗಿ ಪ್ರತ್ಯೇಕ ಕಾಯ್ದೆ ರೂಪಿಸಿ, ಅನುಷ್ಠಾನಗೊಳಿಸಲಾಗಿದೆ. ಕಾಯ್ದೆಯ ಅನುಷ್ಠಾನದ ನಂತರದಿಂದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿದ್ದು, ಒಂದೇ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗಿಲ್ಲ ಎಂದರು.

ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಇಂಚಿಗೆರಿ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಪ್ರೊ. ಸಿ.ಎನ್‌.ಪಾಟೀಲ್‌, ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್‌ ಇತರರಿದ್ದರು.

ನಾನು ಸಂಡೆ-ಮಂಡೆ ವಕೀಲ: ಸಿಎಂ

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಕೀಲ ವೃತ್ತಿಯನ್ನು ಸ್ಮರಿಸಿಕೊಂಡು ಚುನಾವಣಾ ರಾಜಕೀಯಕ್ಕೆ ಬರುವುದಕ್ಕೆ ಮುಂಚೆ ನಾನು ವಕೀಲನಾಗಿ ಕೆಲಸ ಮಾಡಿದ್ದೇನೆ. ಆದರೆ, ವಕೀಲ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸಂಡೆ-ಮಂಡೆ ಲಾಯರ್‌ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲದೆ, 1980-83ರಲ್ಲಿ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿಯೂ ಕೆಲಸ ಮಾಡಿದ್ದೆ. ನಾನು ಎಷ್ಟರ ಮಟ್ಟಿಗೆ ಪಾಠ ಹೇಳಿದ್ದೆ ಎಂಬುದು ನನಗೂ ತಿಳಿದಿಲ್ಲ. ಆದರೂ, ವಿದ್ಯಾರ್ಥಿಗಳು ಚೆನ್ನಾಗಿ ಹೇಳಿಕೊಡುತ್ತೀರಿ ಎಂದು ಹೇಳುತ್ತಿದ್ದರು ಎಂದು ಹಾಸ್ಯಭರಿತವಾಗಿ ಹೇಳಿದರು.

Read more Articles on