ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಸಹನೆ ರೂಢಿಸಿಕೊಳ್ಳುವುದರಿಂದ ಓದಿನಲ್ಲಿ ಪ್ರಗತಿ ಸಾಧಿಸಬಹುದು. ಉತ್ತಮ ಮಾರ್ಗದರ್ಶನ ಹಾಗೂ ಪರಿಣಾಮಕಾರಿ ಅಧ್ಯಯನ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಬೋಧಕರು ಸಹಕಾರ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಖಜಾಂಚಿ ಕೆ.ಎಂ.ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಪಾಲನಜೋಗಿಹಳ್ಳಿಯಲ್ಲಿರುವ ಶ್ರೀ ಮಾರುತಿ ಎಜುಕೇಶನಲ್‌ ಟ್ರಸ್ಟ್‌ ಜಕ್ಕಸಂದ್ರ ನಾರಾಯಣಪ್ಪ ಆಂಗ್ಲ ಪ್ರೌಢಶಾಲೆಯ 22ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಯಾರೇ ತಪ್ಪು ಮಾಡಿದರೂ ತಿದ್ದಿಕೊಳ್ಳಲು ಅವಕಾಶವಿರುತ್ತದೆ. ಆದರೆ ಮಕ್ಕಳ ಭವಿಷ್ಯ ರೂಪಿಸುವ ಹೊಣೆಗಾರಿಕೆ ಹೊಂದಿರುವ ಶಿಕ್ಷಕರು ತಪ್ಪು ಮಾಡಿದರೆ ಸಮಾಜಕ್ಕೆ ದೊಡ್ಡ ನಷ್ಟ ಎಂದರು.

ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಮಕ್ಕಳನ್ನು ವಿದ್ಯಾವಂತರಾಗಿ ರೂಪಿಸುವ ಜೊತೆಗೆ ಪ್ರಜ್ಞಾವಂತರನ್ನಾಗಿಯೂ ಬೆಳೆಸಬೇಕು. ಮನುಷ್ಯ ಸಂಬಂಧಗಳ ಅರಿವು ಅಗತ್ಯ. ಅವುಗಳ ಮಹತ್ವವನ್ನು ತಿಳಿಸಿ, ಮನುಷ್ಯತ್ವದ ಚಿಂತನೆಗಳನ್ನು ರೂಢಿಸಿಕೊಂಡಾಗ ಮಾತ್ರ ವಿದ್ಯಾಭ್ಯಾಸಕ್ಕೆ ಅರ್ಥವಿರುತ್ತದೆ. ಕೌಶಲ್ಯಾಧಾರಿತ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವೂ ಅಗತ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಜಯಗಳಿಸಿದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮಮ್ಮ ಲಕ್ಷ್ಮೀನಾರಾಯಣ್, ಬೆಂ.ಗ್ರಾ ಜಿಲ್ಲಾ ಕುರುಬರ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್.ರವಿ, ಮುಖ್ಯಶಿಕ್ಷಕ ಅರಸೇಗೌಡ, ಸ್ಥಳೀಯ ಮುಖಂಡ ಮುನಿರಾಜು, ಭರತ್‌ಕುಮಾರ್‌, ಮಂಜುನಾಥ್‌ ಮತ್ತಿತರರು ಭಾಗವಹಿಸಿದ್ದರು.


8ಕೆಡಿಬಿಪಿ4-

ಪಾಲನಜೋಗಿಹಳ್ಳಿಯ ಜಕ್ಕಸಂದ್ರ ನಾರಾಯಣಪ್ಪ ಆಂಗ್ಲ ಪ್ರೌಢಶಾಲೆ ವಾರ್ಷಿಕೋತ್ಸವವನ್ನು ಕೆ.ಎಂ.ಕೃಷ್ಣಮೂರ್ತಿ ಉದ್ಘಾಟಿಸಿದರು.