ಸರ್ಕಾರಿ ಶಾಲೆ ಕೆಡವಿ ಮಲ್ಟಿ ಪಾರ್ಕಿಂಗ್‌ ಮಾಡುವ ಯೋಜನೆ ಕೈಬಿಡಿ

KannadaprabhaNewsNetwork |  
Published : Jan 18, 2024, 02:06 AM IST
ಪ್ರತಿಭಟನೆ | Kannada Prabha

ಸಾರಾಂಶ

ಪಾಲಿಕೆ ಅನಾವಶ್ಯಕವಾಗಿ ಶಾಲೆ ಕೆಡವಿ ಅಲ್ಲಿ ಮಲ್ಟಿಫ್ಲೆಕ್ಸ್‌ ಪಾರ್ಕಿಂಗ್‌ ವ್ಯವಸ್ಥೆ ಮತ್ತು ಕಾಂಪ್ಲೆಕ್ಸ್‌ ಕಟ್ಟಬೇಕೆಂಬ ಯೋಜನೆ ರೂಪಿಸಿದೆ. ಈ ಯೋಜನೆ ಅನುಷ್ಠಾನಕ್ಕೆ ಶಾಲೆ ಜಾಗೆ ಸೂಕ್ತವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: 156 ವರ್ಷಗಳ ಇತಿಹಾಸ ಹೊಂದಿದ ಇಲ್ಲಿಯ ಬ್ರಾಡ್‌ವೇ ರಸ್ತೆಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ನಂ. 2 ಶಾಲೆ ಕೆಡವಿ ಮಲ್ಟಿ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಬುಧವಾರ ಪ್ರತಿಭಟನೆ ನಡೆಸಿತು.

ಇಲ್ಲಿಯ ದುರ್ಗದಬೈಲ್‌ನಲ್ಲಿ ಶಾಲೆ ಆವರಣದಿಂದ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಪಾಲಿಕೆ ಆಯುಕ್ತರ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ಇದಕ್ಕೂ ಪೂರ್ವದಲ್ಲಿ ದುರ್ಗದಬೈಲ್‌ ಬಳಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಡೋಣಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಬಳಿಕ ಹು-ಧಾ ಮಹಾನಗರ ಕೈಗೊಳ್ಳಲು ಮುಂದಾಗಿರುವ ಯೋಜನೆಗೆ ಕಿಡಿಕಾರಿದರು. ನಂತರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಪಾಲಿಕೆ ಅನಾವಶ್ಯಕವಾಗಿ ಶಾಲೆ ಕೆಡವಿ ಅಲ್ಲಿ ಮಲ್ಟಿಫ್ಲೆಕ್ಸ್‌ ಪಾರ್ಕಿಂಗ್‌ ವ್ಯವಸ್ಥೆ ಮತ್ತು ಕಾಂಪ್ಲೆಕ್ಸ್‌ ಕಟ್ಟಬೇಕೆಂಬ ಯೋಜನೆ ರೂಪಿಸಿದೆ. ಈ ಯೋಜನೆ ಅನುಷ್ಠಾನಕ್ಕೆ ಶಾಲೆ ಜಾಗೆ ಸೂಕ್ತವಲ್ಲ. ಈ ಯೋಜನೆ ಜಾರಿಯಿಂದ ಇಲ್ಲಿ ಕಲಿಯುತ್ತಿರುವ ಬಡ ಮಕ್ಕಳ ಭವಿಷ್ಯಕ್ಕೆ ಸಂಚಕಾರ ಉಂಟಾಗಲಿದೆ. ಹೀಗಾಗಿ, ಈ ಯೋಜನೆ ಕೈಬಿಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಜಾಗೆಯಲ್ಲಿ ಸರಕಾರಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ ಮತ್ತು ಹೈಸ್ಕೂಲ್‌ ನಿರ್ಮಾಣ ಮಾಡಬೇಕು. ಇದರಿಂದ ಬಡ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ. ಮಕ್ಕಳಿಗೆ ಖಾಸಗಿ ಶಾಲೆ ಗುಣಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಇದರಿಂದ ಸರಕಾರಿ ಶಾಲೆ ಉಳಿಸಿ ಬೆಳೆಸಿದಂತಾಗುತ್ತದೆ. ಈ ರೀತಿಯ ಯೋಜನೆಗೆ ಹಳೆ ವಿದ್ಯಾರ್ಥಿಗಳ ಸಂಘದಿಂದ ಪೂರಕ ಸಹಕಾರ ನೀಡಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಮಹೇಶ ಚಿಕ್ಕವೀರಮಠ, ಶ್ರೀಧರ ಹಳ್ಳಿ, ಸಾಗರ ಗಾಯಕವಾಡ, ಸಿ.ಬಿ. ಮರಿಗೌಡರ, ಗಣಪತಿ ಗಾಳಿ, ವಾಮನ ಕೊಳೇಕರ, ಸಂದೀಪ ಬೂದಿಹಾಳ, ಮುಕುಂದ ಜಠಾರ, ಹನುಮಂತಸಾ ನಿರಂಜನ, ಸಂತೋಷ ಸಿಗ್ಲಿಮಠ, ರಾಜು ಯಡ್ರಾಂವಿ, ಗಣಪತಿ ಕಲಬುರ್ಗಿ ಸೇರಿದಂತೆ ಇತರರು ಇದ್ದರು.

ಒಂದು ಶಾಲೆ ಬಂದ್‌ ಮಾಡಿದರೆ, ನೂರಾರು ದೇವಸ್ಥಾನ ಕೆಡವಿದ ಶಾಪ ತಟ್ಟುತ್ತದೆ. ಈ ಶಾಲೆಯಲ್ಲಿ ಕಲಿತವರು ಉನ್ನತ ಹುದ್ದೆಯಲ್ಲಿದ್ದಾರೆ. ಖಾಸಗಿ ಶಾಲೆ ಬೆಳೆಸುವ ಉದ್ದೇಶದಿಂದ ನಮ್ಮ ಶಾಲೆ ಬಂದ್‌ ಮಾಡಲಾಗುತ್ತಿದೆ. ಇದಕ್ಕೆ ನಾವು ಸುಮ್ಮನಿರುವುದಿಲ್ಲ ಎಂದು ಶಾಲೆ ಹಳೆಯ ವಿದ್ಯಾರ್ಥಿ ಹನುಮಂತಸಾ ನಿರಂಜನ ಎಚ್ಚರಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ