ಕಾಳಿ ನದಿಯ ತಟದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ । ನಿರ್ವಹಣೆ ಕೊರತೆಗುರುಶಾಂತ ಜಡೆಹಿರೇಮಠ
ದಾಂಡೇಲಿ ಜೋಯಿಡಾ ಭಾಗವು ಪ್ರವಾಸಿ ತಾಣವಾಗಿ ಬೆಳೆಯುತ್ತಿದ್ದು, ಆ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ತಾಣವಾಗಿ ಬೆಳೆಯಬೇಕಿದ್ದ ಮೊಸಳೆ ಪಾರ್ಕ್ ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದಂತೆ ಕಾಣುತ್ತಿದೆ.
ದಾಂಡೇಲಿಯ ಹಳಿಯಾಳ ರಸ್ತೆಗೆ ಬರುವ ಹಾಳಮಡ್ಡಿ ಸಮೀಪ ಕಾಳಿ ನದಿಯ ತಟದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಎರಡು ವರ್ಷಗಳ ಹಿಂದೆ ಆರಂಭವಾಯಿತು. ನೂರಾರು ಮೊಸಳೆಗಳು ಈ ಪಾರ್ಕ್‌ನಲ್ಲಿವೆ.ಡಿಸೆಂಬರ್, ಜನವರಿ ತಿಂಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಪಟ್ಟಿಯಲ್ಲಿ ಮೊಸಳೆ ಪಾರ್ಕ್ ಕೂಡ ಒಂದಾಗಿದೆ. ಮೊಸಳೆ ಪಾರ್ಕ್ ಪಕ್ಕದಲ್ಲಿ ನಿರ್ಮಿಸಿರುವ ಸುಂದರ ಉದ್ಯಾನದ ನಿರ್ವಹಣೆ ಕೊರತೆಯಿಂದಾಗಿ ಎತ್ತರಕ್ಕೆ ಹುಲ್ಲು ಬೆಳೆದಿದೆ. ಪಾರ್ಕಿನ ಒಳಗಿರುವ ಮೊಸಳೆ, ಜಿರಾಫೆ, ಜಿಂಕೆ ಪ್ರತಿಕೃತಿಗಳ ಬಣ್ಣ ಮಾಸಿದೆ. ಮೊಸಳೆ ವೀಕ್ಷಣೆಯ ಗೋಪುರ ಅಲ್ಲಲ್ಲಿ ತುಕ್ಕು ಹಿಡಿದಿದೆ. ಇನ್ನು ಮೊಸಳೆಯ ಜೀವನ ಶೈಲಿ ವಿವರವಾಗಿ ತಿಳಿಸಲು ಪಾರ್ಕ್‌ನಲ್ಲಿ ಯಾವುದೇ ಗೈಡ್ ಇಲ್ಲದಿರುವುದು ಹಾಗೂ ಪ್ರವಾಸಿಗರಿಗೆ ಮೊಸಳೆ ಜೀವನದ ಕ್ರಮದ ಕುರಿತು ಯಾವುದೇ ಮಾಹಿತಿ ಫಲಕ ಇಲ್ಲದಿರುವುದು ಕೊರತೆಯಾಗಿ ಎದ್ದು ಕಾಣುತ್ತದೆ.ಕಳೆದ ಮಾರ್ಚ್‌ನಲ್ಲಿ ಮೊಸಳೆ ಪಾರ್ಕ್ ನಿರ್ವಹಣೆ ಮತ್ತು ಶುಲ್ಕ ಸಂಗ್ರಹಣೆಯ ಟೆಂಡರ್ ಮುಗಿದಿದ್ದು, ಪ್ರವಾಸೋದ್ಯಮ ಇಲಾಖೆ ಮತ್ತೆ ಟೆಂಡರ್ ಕರೆಯಲು ವಿಳಂಬ ಮಾಡುತ್ತಿದೆ. ಮೊಸಳೆ ಪಾರ್ಕ್ ನಿರ್ವಹಣೆ ಮತ್ತು ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಟೆಂಡರ್ ಕರೆದು ಗುತ್ತಿಗೆ ನೀಡುತ್ತಿತ್ತು. ಆದರೆ, ಕಳೆದ ಮಾರ್ಚ್‌ನಿಂದ ನಿರ್ವಹಣೆ ಮಾಡಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮುಂದೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.ಇನ್ನು ಮಕ್ಕಳಿಗೆ ₹೨೦ ದೊಡ್ಡವರಿಗೆ ₹೫೦ ಶುಲ್ಕ ಆಕರಣೆ ಮಾಡಲಾಗುತ್ತಿದ್ದು, ಒಳ ಹೋದ ಪ್ರವಾಸಿಗರಿಗೆ ಮೊಸಳೆ ಕುರಿತು ಸರಿಯಾದ ಮಾಹಿತಿ ಹಾಗೂ ವಿವರಣೆ ಸಿಗುತ್ತಿಲ್ಲ. ಪಾರ್ಕ್‌ನಲ್ಲಿ ಮೊಸಳೆ ಕಂಡರೆ ಅದೃಷ್ಟವಾಗಿದೆ. ₹೫೦ ನೀಡಿದ್ದು ವ್ಯರ್ಥವಾಯಿತು ಎನ್ನುತ್ತಾರೆ ಹೊರ ಊರಿಂದ ಬಂದ ಹೆಸರು ಹೇಳಲು ಇಚ್ಛಿಸದ ಪ್ರವಾಸಿಗರು. ಬೇಕಿದೆ ಬೈನಾಕುಲರ್:ಕಾಳಿ ನದಿಯಲ್ಲಿ ಸಹಜವಾಗಿ ಕಣ್ಣಿಗೆ ಕಾಣಿಸುತ್ತಿದ್ದ ಮೊಸಳೆಗೂ ಈಗ ಮೊಸಳೆಗಳು ಬರಿಗಣ್ಣಿಗೆ ಕಾಣಿಸುವುದು ಕಷ್ಟವಾಗಿದೆ. ಹೀಗಾಗಿ ನೋಡಲು ಬೈನಾಕುಲಾರ ಇದ್ದರೆ ಒಳ್ಳೆಯದು ಎಂದು ಹಾವೇರಿಯ ಪ್ರವಾಸಿಗ ಪ್ರಭಾಸ್ ಹೇಳುತ್ತಾರೆ.ನಿರ್ವಹಣೆ ಕೊರತೆ:
ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಕುಳಿತುಕೊಳ್ಳುವ ಆಸನ, ಜಿರಾಫೆ, ಮೊಸಳೆ ಮುಂತಾದ ಪ್ರಾಣಿಗಳು ಬಣ್ಣ ಕಳೆದುಕೊಂಡಿವೆ. ಅಲಂಕಾರ ಗಿಡಗಳು ನಿರ್ವಹಣೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಬೆಳೆದು ಪಾರ್ಕಿನ ಅಂದವನ್ನು ಹಾಳು ಮಾಡಿವೆ. ಪಾರ್ಕ್ ನಿರ್ವಹಣೆಗೆ ಪಕ್ಕದಲ್ಲಿ ನದಿ ಇದ್ದರೂ ನೀರಿನ ಕೊರತೆ ಇದೆ.ಪಾರ್ಕ್‌ನ ವೀಕ್ಷಣಾ ಗೋಪುರದ ರಕ್ಷಣಾ ಗೋಡೆಗಳ ಮೇಲೆ ಮೊಸಳೆ ಜೀವನ ಕ್ರಮ, ಆಹಾರ ಕ್ರಮ, ಸಂತಾನೋತ್ಪತ್ತಿ, ವಾಸಸ್ಥಳದ ಭೌಗೋಳಿಕ ಪರಿಸರ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ಫಲಕವನ್ನು ಇಲ್ಲವೇ ಎಲ್‌ಇಡಿ ಪರದೆ ಅಳವಡಿಸಬೇಕು, ಮೊಸಳೆ ಜೀವನ, ಪ್ರಜಾತಿ, ವಾಸ ಸ್ಥಾನ, ಸಂತತಿ, ಜೀವನ ಕ್ರಮ ಮನುಷ್ಯರ ಪ್ರಾಣಿಗಳ ಸಂಘರ್ಷದ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.ಮೊಸಳೆ ಪಾರ್ಕಿನ ಗುತ್ತಿಗೆ ಅವಧಿ ಮುಗಿದಿದ್ದು, ಶುಲ್ಕ ಆಕರಣೆ ಮತ್ತು ಪಾರ್ಕ್ ನಿರ್ವಹಣೆಗೆ ಸಂಬಂಧಿಸಿದಂತೆ ಇನ್ನೇನು ಕೆಲವೇ ದಿನಗಳಲ್ಲಿ ಟೆಂಡರ್‌ನ್ನು ಕರೆಯಲಾಗುವುದು. ಈಗ ತಾತ್ಕಾಲಿಕವಾಗಿ ಸ್ಥಳೀಯರು ಪಾರ್ಕ್ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಜಯಂತ್ ತಿಳಿಸಿದ್ದಾರೆ.