ಕನ್ನಡಪ್ರಭ ವಾರ್ತೆ ಕುಂದಾಪುರ
ಜಿಲ್ಲೆಯ ಅರ್ಧ ಭಾಗಕ್ಕಿಂತ ಹೆಚ್ಚು ಭಾಗದ ಜನರು ಮಾತನಾಡುವ ಕುಂದಾಪ್ರ ಕನ್ನಡ ಭಾಷೆಗೆ ಸುದೀರ್ಘ ಇತಿಹಾಸವಿದೆ. ಈ ಭಾಷೆಗೆ ಸೊಗಡಿದೆ, ಸಂಸ್ಕೃತಿ ಇದೆ. ನಮ್ಮ ಅಬ್ಬಿ ( ತಾಯಿ ) ಭಾಷಿಯ ಹಿರಿತನ ಹಾಗೂ ಪರಂಪರೆ ಉಳಿಸಿ-ಬೆಳೆಸುವ ಕೆಲಸ, ಕುಂದಾಪ್ರ ಕನ್ನಡ ಮಾತನಾಡುವ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಮಂಗಳೂರು ವಿ.ವಿ.ಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಇಲ್ಲಿನ ಹೊಟೇಲ್ ಯುವಮನೀಶ್ ಸಭಾಂಗಣದಲ್ಲಿ ಗುರುವಾರ ಮಂಗಳೂರು ವಿ.ವಿ ಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಆಯ್ದ ಸಂಘಟನೆಗಳ ಪ್ರತಿನಿಧಿಗಳ ಕುಂದಾಪ್ರ ಭಾಷಿಕರೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ತಾಯಿ ಭಾಷೆ ಕುಂದಾಪ್ರ ಕನ್ನಡ ಮಾತನಾಡುವಾಗ ಯಾವುದೇ ಹಿಂಜರಿಕೆ ಇರಬಾರದು. ಮನೆಯಲ್ಲಿ, ಶಾಲೆಯಲ್ಲಿ, ಕಾರ್ಯಕ್ರಮಗಳಲ್ಲಿ ಸಾಧ್ಯವಾದರೆ, ಉದ್ಯೋಗ ಸ್ಥಳಗಳಲ್ಲಿಯೂ ನಮ್ಮವರೊಂದಿಗೆ ಅಬ್ಬಿ ಭಾಷೆ ಮಾತನಾಡುವುದನ್ನು ರೂಢಿಯಾಗಿರಿಸಿಕೊಳ್ಳಬೇಕು. ಭಾಷಾ ಬೆಳವಣಿಗೆಯ ಮೂಲಕ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯೂ ಬೆಳೆಯುತ್ತದೆ. ಒಳ್ಳೆಯ ಸಂಸ್ಕಾರಗಳೊಂದಿಗೆ ಭವಿಷ್ಯದ ಪ್ರಜೆಗಳಾಗುವ ನಮ್ಮ ಮಕ್ಕಳು ಸದೃಢ ಸಮಾಜವನ್ನು ಕಟ್ಟುತ್ತಾರೆ ಎಂದರು.ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ರಾಜು ಮೊಗವೀರ ಮಾತನಾಡಿ, ವಿಶ್ವ ವಿದ್ಯಾಲಯದಲ್ಲಿ ಇರುವ 24 ಪೀಠಗಳಿಗಿಂತಲೂ, ಕುಂದಾಪ್ರ ಕನ್ನಡ ಅಧ್ಯಯನ ಪೀಠ ವಿಭಿನ್ನ ಚಿಂತನೆಗಳೊಂದಿಗೆ ಕೆಲಸ ಮಾಡುತ್ತಿದೆ. ಪೀಠದ ಸದಸ್ಯರು ಯಾವುದೇ ಆರ್ಥಿಕ ಪ್ರತಿಫಲ ನಮಗೆ ಬೇಡ ಎನ್ನುವುದನ್ನು ಪ್ರಥಮ ಸಭೆಯಲ್ಲಿಯೇ ದಾಖಲಿಸಿದ್ದಾರೆ. ಇದೇ ಮೊದಲ ಬಾರಿಗೆ ವಿವಿ ಯ ಪೀಠವೊಂದು ಅಧ್ಯಯನ ವ್ಯಾಪ್ತಿಯ ಸ್ಥಳಕ್ಕೆ ಬಂದು ಭಾಷಿಕರೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಿರುವುದು ಅಭಿನಂದನೀಯ ಎಂದರು.
ಹಿರಿಯ ವ್ಯಂಗ್ಯ ಚಿತ್ರಕಾರ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ, ಪಂಜು ಗಂಗೊಳ್ಳಿ ಅವರು, ಕುಂದಗನ್ನಡ ಇತ್ತೀಚಿನ ವರ್ಷಗಳಲ್ಲಿ ಬಳಕೆಗೆ ಬಂದ ಪರಿವರ್ತಿತ ಶಬ್ದ. ಈ ಶಬ್ದದ ಉಚ್ಛಾರಣೆಯಲ್ಲಿ ಕುಂದನಗರಿ ಬೆಳಗಾವಿಯ ಸಾಮೀಪ್ಯ ಕಾಣಿಸುತ್ತದೆ. ಕುಂದಾಪ್ರ ಕನ್ನಡ ಈ ಭಾಗದ ಅತ್ಯಂತ ಜನಜನಿತವಾದ ಪದಗಳಾಗಿರುವುದರಿಂದ ಅಧ್ಯಯನ ಪೀಠವನ್ನು ‘ಕುಂದಾಪ್ರ ಕನ್ನಡ ಅಧ್ಯಯನ ಪೀಠ’ ಎಂದು ಕರೆಯುವುದೇ ಸೂಕ್ತ ಎಂದರು.ಹಿರಿಯ ನ್ಯಾಯವಾದಿ ಟಿ.ಬಿ.ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೋ, ಖಾರ್ವಿ ಸಮಾಜದ ಪ್ರಮುಖರಾದ ಜಯಾನಂದ ಖಾರ್ವಿ, ಕಲಾಕ್ಷೇತ್ರ ಸಂಘಟನೆಯ ರಾಜೇಶ್ ಕಾವೇರಿ, ಬೀಜಾಡಿ ಮಿತ್ರವೃಂದದ ಚಂದ್ರಶೇಖರ ಬೀಜಾಡಿ ಮತ್ತಿತರರು ಮಾತನಾಡಿದರು.
ಪತ್ರಕರ್ತ ಸೋಮಶೇಖರ ಪಡುಕೆರೆ ಮಾತನಾಡಿದರು. ಬಾರ್ಕೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಮಾತನಾಡಿ, ಸಣ್ಣ ಸಣ್ಣ ಭಾಷೆಗಳನ್ನು ಜೀವಂತವಾಗಿ ಉಳಿಸುವುದು ಕೂಟ ಅತ್ಯಂತ ಕಷ್ಟದ ಕೆಲಸ. ಕುಂದಾಪ್ರ ಭಾಷೆ ಹೆಚ್ಚು ಸಂವಹನದಿಂದ ವ್ಯಾಪ್ತಿ ಹಾಗೂ ಬೆಳವಣಿಗೆಯನ್ನು ವಿಸ್ತರಿಸಿಕೊಳ್ಳುತ್ತದೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ್ ಪುತ್ರನ್, ರಾಜ್ಯ ಪಂಚಾಯತ್ ರಾಜ್ ತಜ್ಞ ಟಿ.ಬಿ.ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ, ಬೈಂದೂರು ತಾಲೂಕು ಭಾರತ್ ಸೇವಾದಳ ಸಂಘಟನೆ ಅಧ್ಯಕ್ಷ ಶರತ್‌ಕುಮಾರ ಶೆಟ್ಟಿ ಉಪ್ಪುಂದ, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ಮತ್ತಿತರರು ಮಾತನಾಡಿದರು.
ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯೆ ಡಾ.ರೇಖಾ ಬನ್ನಾಡಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಹಟ್ಟಿಯಂಗಡಿ ಯಕ್ಷಗಾನ ಮೇಳದ ಯಜಮಾನರಾದ ವಕ್ವಾಡಿ ರಂಜಿತ್‌ಕುಮಾರ ಶೆಟ್ಟಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸದಾನಂದ ಬೈಂದೂರು, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ್ ವೈದ್ಯ, ಕಲಾಚಿಗುರು ಸಂಸ್ಥೆಯ ಚೇತನ್ ನೈಲಾಡಿ ಅಭಿಪ್ರಾಯ ಮಂಡಿಸಿದರು.ಮಂಗಳೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೊನ್ಸ್, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸಂಯೋಜಕ ಡಾ.ನಾಗಪ್ಪ ಗೌಡ ಇದ್ದರು.ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ರಾಜೇಶ್ ಕೆ.ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉದಯ್‌ಕುಮಾರ ಶೆಟ್ಟಿ ಪಡುಕೆರೆ ಸ್ವಾಗತಿಸಿದರು, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಹಾಗೂ ರಾಜೇಶ್ ಹೆಮ್ಮಾಡಿ ಪೋಟೋಗ್ರಾಫಿ ಸಂಘಟಿಸಿದರು.