ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳ ಆರೈಕೆಗಾಗಿ ತಾಲೂಕಿನ ಅಬ್ಬಿಗೇರಿಯಲ್ಲಿ ಆರಂಭಿಸಿದ ಕೂಸಿನ ಮನೆ ಶಿಶುಪಾಲನಾ ಕೇಂದ್ರ ಮಾದರಿಯಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ಗ್ರಾಮದಲ್ಲಿ ಪ್ರತಿ ದಿನ ಕೂಸಿನ ಮನೆಗೆ 15ಕ್ಕೂ ಹೆಚ್ಚು ಮಕ್ಕಳನ್ನು ಪಾಲಕರು ಬಿಟ್ಟು ಹೋಗುತ್ತಾರೆ. ಆರೈಕೆದಾರರಾದ ಐಶ್ವರ್ಯ ದೊಡ್ಡಮನಿ, ಹಾಗೂ ಲಕ್ಷ್ಮಿ ತಲ್ಲೂರ ಸಹ ಮಕ್ಕಳನ್ನು ದಿನನಿತ್ಯ ಆಟವಾಡಿಸುತ್ತಾ ಉತ್ಕೃಷ್ಟ ಮಟ್ಟದ ಆಹಾರವನ್ನು ಮಕ್ಕಳಿಗೆ ತಿನ್ನಿಸುತ್ತಾ ಮಕ್ಕಳ ಲಾಲನೆ ಪಾಲನೆ ಮಾಡುತ್ತಾರೆ ಎಂದು ಕೂಸಿನ ಮನೆ ಆರೈಕೆದಾರ ಕಾರ್ಯ ಶ್ಲಾಘಿಸಿದರು.ಗ್ರಾಪಂ ಪಿಡಿಒ ಲೋಹಿತ ಎಂ ಮಾತನಾಡಿ, ಕಾರ್ಯ ನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೂಸಿನ ಮನೆಯನ್ನು ಕೈಲಾದ ಮಟ್ಟಕ್ಕೆ ಚೆನ್ನಾಗಿ ನೋಡಿಕೊಳ್ಳಲು ಶ್ರಮ ಪಡುತ್ತಿದ್ದೇವೆ, ಕೂಸಿನ ಮನೆಯು ನರೇಗಾ ಮಹಿಳಾ ಕಾರ್ಮಿಕರ ಸಬಲೀಕರಣಕ್ಕೆ ಮಹತ್ವದ ಕೊಡುಗೆಯಾಗಿದೆ. ಇದು ಕೇವಲ ಮಕ್ಕಳ ಆರೈಕೆಗೆ ಮಾತ್ರವಲ್ಲ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದರು.ನಮ್ಮ ಗ್ರಾಮದ ಕೂಸಿನ ಮನೆಯಿಂದ ಮಹಿಳಾ ಕೂಲಿ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗಿದೆ, ಪ್ರತಿ ದಿನ ದುಡಿಯಲಿಕ್ಕೆ ಹೋಗುವ ತಾಯಂದಿರು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಚಿಂತೆಯಿಲ್ಲದೆ ಕೆಲಸಕ್ಕೆ ಹೋಗುತ್ತಾರೆ, ಇದರಿಂದ ಬಹಳಷ್ಟು ಅನುಕೂಲವಾಗಿದೆ ಅಂತಾ ಮಹಿಳಾ ಕಾರ್ಮಿಕರು ನನ್ನ ಬಳಿ ಖುಷಿ ವ್ಯಕ್ತಪಡಿಸುತ್ತಾರೆ ಅಬ್ಬಿಗೇರಿ ಗ್ರಾಪಂ ಅಧ್ಯಕ್ಷೆ ಲಲಿತಾ ರಾಠೋಡ ಹೇಳಿದರು.
ಕೂಸಿನ ಮನೆಯಲ್ಲಿ ಮಕ್ಕಳು ಉಳಿದ ಮಕ್ಕಳ ಜೊತೆಗೆ ಸೇರಿ ಆಟ ವಾಡುತ್ತಾ, ಊಟ ಮಾಡುತ್ತಾ ಕಾಲ ಕಳೆಯುತ್ತಾರೆ. ಕೆಲಸ ಮುಗಿಸಿ ಬರುವ ಸಂದರ್ಭದಲ್ಲಿ ಮಕ್ಕಳನ್ನು ನಾವು ಮನೆಗೆ ಕರೆದುಕೊಂಡು ಹೊಗುತ್ತೇವೆ ಮಹಿಳಾ ಕೂಲಿ ಕಾರ್ಮಿಕರಾದ ರೇಖಾ ರಾಜೂರ ಹೇಳಿದರು.