ಮೈಸೂರು : ಸಿದ್ದರಾಮಯ್ಯ ಮತ್ತು ದೇವರಾಜ ಅರಸರು ಈ ರಾಜ್ಯ ಪಡೆದಿರುವ ಉತ್ತಮ ವ್ಯಕ್ತಿಗಳು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.
ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟ, ಎಚ್.ವಿ. ರಾಜೀವ್ ಸ್ನೇಹ ಬಳಗ ಆಯೋಜಿಸಿದ್ದ ಲೇಖಕ ಡಾ.ಮಹೇಶ್ ದಳಪತಿ ಅವರ ''''''''ಅಭಿನವ ಅರಸು: ಸಿದ್ದರಾಮಯ್ಯ; ಅವರ ಬದುಕು ಮತ್ತು ರಾಜಕಾರಣ ಕೃತಿ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಯಾರು ಶಕ್ತಿ ಕೊಡುತ್ತಾರೆಯೋ ಅವರನ್ನು ನಾವು ದೇವರು ಎಂದು ಭಾವಿಸಬೇಕು. ಅಂತಹವರಿಗೆ ಶಕ್ತಿ ತುಂಬುವ ಕೆಲಸ ನಮ್ಮಿಂದಾಗಬೇಕು. ಸಿದ್ದರಾಮಯ್ಯ ಅವರು ದೀನ, ದಲಿತರ ಬಗ್ಗೆ ಅಪಾರ ಒಲವು ಹೊಂದಿರುವುದನ್ನು ಕೆಲವರು ಸಹಿಸುತ್ತಿಲ್ಲ ಎಂದರು.ಎಂಬಿಬಿಎಸ್ ವ್ಯಾಸಂಗ ಮಾಡಿದ್ದ ನನಗೆ ದೇವರಾಜ ಅರಸು ಅವರು ತಾವೇ ಕರೆದುಕೊಂಡು ಹೋಗಿ ಉದ್ಯೋಗ ನೀಡಿದ್ದಾಗಿ ಸ್ಮರಿಸಿದ ತಿಮ್ಮಯ್ಯ ಅವರು, ದೇವರಾಜ ಅರಸು ಅವರು ನನಗೆ ಜೀವನ ನೀಡಿದರೆ, ಸಿದ್ದರಾಮಯ್ಯ ಅವರು ನನಗೆ ಹೆಸರು ನೀಡಿದ್ದಾರೆ. ಅವರು ಅಭಿನವ ಅರಸು ಮಾತ್ರವಲ್ಲ. ಅಭಿನವ ಅಭಯದಾತ ಎಂದು ಬಣ್ಣಿಸಿದರು.
ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ. ಶಿವಸ್ವಾಮಿ ಮಾತನಾಡಿ, ಈ ಕೃತಿಯು ಗುಣಾತ್ಮಕ ಬರಹವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೋರಾಟದ ಬದುಕು, ರಾಜಕೀಯ ಜೀವನ, ಜನತೆಗಾಗಿ ಮಾಡಿದ ಕೆಲಸವನ್ನು ಸಮರ್ಥವಾಗಿ ವಿವರಿಸಿದೆ ಎಂದು ಹೇಳಿದರು.
ದೇಶದ ಬೇರೆ ರಾಜ್ಯಗಳನ್ನು ಅವಲೋಕಿಸಿದಾಗ ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ಅಪರೂಪ ಮತ್ತು ಸಮರ್ಥವಾಗಿವೆ. ಸಂಘಟನಾತ್ಮಕ ಕೆಲಸ ಮಾಡುವ ನಾಯಕನ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ತಪ್ಪು ಮಾಡದ ವ್ಯಕ್ತಿ ಮಾತ್ರ ನಿರ್ಭಯವಾಗಿ ಆಡಳಿತ ನಡೆಸುತ್ತಾರೆ. ಸಿದ್ದರಾಮಯ್ಯ ಅವರು ಅಂಥ ನಾಯಕ ಎಂದರು.
ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್, ಪ್ರೊ.ಡಿ. ಆನಂದ್ ಅವರು ಕೃತಿ ಕುರಿತು ಮಾತನಾಡಿದರು.
ಪ್ರೊ.ಕೆ.ವೈ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ಕೆ. ಶಿವರಾಮ್, ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಆರ್. ಮಹದೇವ್, ಪ್ರಗತಿಪರ ಚಿಂತಕ ಅಹಿಂದ ಜವರಪ್ಪ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ನಾಗರಾಜ್, ಲೇಖಕ ಮಹೇಶ್ ದಳಪತಿ ಇದ್ದರು.