ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಪುರಾಣ ಪ್ರಸಿದ್ಧ ಭೂ ವರಾಹನಾಥ ದೇವಾಲಯದಲ್ಲಿ ಮಾರ್ಚ್ 30ರಂದು ರೇವತಿ ಅಭಿಷೇಕ ಹಾಗೂ ಕಲ್ಯಾಣೋತ್ಸವ ಕಾರ್ಯಗಳು ನಡೆಯಲಿವೆ ಎಂದು ದೇವಾಲಯದ ವ್ಯವಸ್ಥಾಪಕ ಟ್ರಸ್ಟಿ ಶ್ರೀನಿವಾಸ ರಾಘವನ್ ತಿಳಿಸಿದ್ದಾರೆ.ಹಿರಣ್ಯಾಕ್ಷನೆಂಬ ರಾಕ್ಷಸನಿಂದ ಅಪಹರಿಸಲ್ಪಟ್ಟಿದ್ದ ಭೂ ದೇವಿಯನ್ನು ಮಹಾವಿಷ್ಣು ವರಾಹ ರೂಪ ಧರಿಸಿ ಸಂಹರಿಸಿ ಸಮುದ್ರ ತಳದಲ್ಲಿ ಬಂಧಿಸಲ್ಪಟ್ಟಿದ್ದ ಭೂ ದೇವಿಯನ್ನು ರಕ್ಷಿಸಿ ಲೋಕ ಕಲ್ಯಾಣ ಮಾಡಿದ್ದು ರೇವತಿ ನಕ್ಷತದ ಸಂದರ್ಭದಲ್ಲಿ. ಆದ್ದರಿಂದ ಭೂ ವರಾಹನಾಥ ದೇವಾಲಯದಲ್ಲಿ ಪ್ರತೀ ತಿಂಗಳು ರೇವತಿ ಅಭಿಷೇಕ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ.
ಮಾರ್ಚ್ 30ರಂದು ಚಂದ್ರಮಾನ ಯುಗಾದಿ ಮತ್ತು ರೇವತಿ ಅಭಿಷೇಕ ಪೂಜಾ ಕಾರ್ಯಗಳು ಒಟ್ಟಿಗೆ ಸೇರಿವೆ. ರೇವತಿ ಅಭಿಷೇಕದ ಅಂಗವಾಗಿ ಭೂ ದೇವಿ ಸಹಿತ ವಿರಾಜಮಾನನಾಗಿರುವ 18 ಅಡಿ ಎತ್ತರದ ವರಾಹನಾಥನ ಮೂರ್ತಿಗೆ ವಿವಿಧ ಬಗೆಯ ಹೂವು, ಎಳನೀರು, ಹಾಲು, ಶ್ರೀಗಂಧ, ಅರಿಶಿಣ ಮುಂತಾದವುಗಳ ಮೂಲಕ ವಿಶೇಷ ಅಭಿಷೇಕ ಕಾರ್ಯಗಳು ನಡೆಯಲಿವೆ.ಮಾ.30 ಬೆಳಗ್ಗೆ 9 ಗಂಟೆಗೆ ರೇವತಿ ಅಭಿಷೇಕ ಪೂಜಾ ಕಾರ್ಯಗಳು ಆರಂಭವಾಗಲಿವೆ. ಅದೇ ದಿನ ಬೆಳಗ್ಗೆ 11.30ಕ್ಕೆ ಭೂ ವರಾಹನಾಥನ ಕಲ್ಯಾಣೋತ್ಸವ ನಡೆಯಲಿದೆ. ಕಲ್ಯಾಣೋತ್ಸವದ ಅಂಗವಾಗಿ ವರಾಹನಾಥನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತ ಮೆರವಣಿಗೆ ಮಾಡಲಾಗುವುದು ಎಂದು ಶ್ರೀನಿವಾಸ ರಾಘವನ್ ತಿಳಿಸಿದ್ದಾರೆ.
ತಾಲೂಕಿನ ಗಂಜೀಗೆರೆ ಗ್ರಾಪಂ ವ್ಯಾಪ್ತಿಯ ವರಾಹನಾಥ ಕಲ್ಲಹಳ್ಳಿಯ ಹೇಮಾವತಿ ನದಿ ದಂಡೆಯಲ್ಲಿರುವ ದೇವಾಲಯವನ್ನು ಮೈಸೂರಿನ ಶ್ರೀಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದಿಂದ ಶ್ರೀಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೇವತಿ ನಕ್ಷತ್ರ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.