ಪಿಂಚಣಿ, ವೃದ್ಧಾಪ್ಯ ವೇತನ ರದ್ದು ಮಾಡಿ: ಸಿ.ಟಿ.ರವಿ

KannadaprabhaNewsNetwork |  
Published : Aug 12, 2026, 01:15 AM IST
 | Kannada Prabha

ಸಾರಾಂಶ

ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನ,ಬಿಪಿಎಲ್ ಕಾರ್ಡ್ ರದ್ದುಪಡಿಸಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಚಿಕ್ಕಮಗಳೂರು ಗ್ರಾಮಾಂತರ ಬಿಜೆಪಿ ಮಂಡಲ ಕಾರ್ಯಕರ್ತರು, ವಿಧಾನ ಪರಿಷತ್ ಸದಸ್ಯ ಸಿ.ಟಿ‌.ರವಿ ನೇತೃತ್ವದಲ್ಲಿ ಸಖರಾಯಪಟ್ಟಣ ನಾಡಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನ,ಬಿಪಿಎಲ್ ಕಾರ್ಡ್ ರದ್ದುಪಡಿಸಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಚಿಕ್ಕಮಗಳೂರು ಗ್ರಾಮಾಂತರ ಬಿಜೆಪಿ ಮಂಡಲ ಕಾರ್ಯಕರ್ತರು, ವಿಧಾನ ಪರಿಷತ್ ಸದಸ್ಯ ಸಿ.ಟಿ‌.ರವಿ ನೇತೃತ್ವದಲ್ಲಿ ಸಖರಾಯಪಟ್ಟಣ ನಾಡಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಖರಾಯಪಟ್ಟಣದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದ ಬಿಜೆಪಿ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬಿಪಿಎಲ್ ಕಾರ್ಡ್ ರದ್ದು ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿ‌.ಟಿ.ರವಿ, ಸರ್ಕಾರ ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಪಿಂಚಣಿ ನೀಡುವುದು ಅವರ ಬದುಕಿಗೆ ಆಧಾರವಾಗಲು ಮಾತ್ರ. ಆದರೆ ಈಗ ಸರ್ಕಾರದ ವಿವಿಧ ವೇತನಗಳನ್ನು ಪಡೆಯಲು, ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು 32 ಸಾವಿರ ರು. ಮಾಡಿರುವುದು ಅವೈಜ್ಞಾನಿಕ. ಇದರಿಂದ ಸಾವಿರಾರು ಜನರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಸರ್ಕಾರ ನೀಡುವ ಗ್ಯಾರಂಟಿ ಯೋಜನೆಗಳಿಂದ ಪಡೆಯುವ ಹಣವನ್ನು ಆದಾಯ ಎಂದು ಪರಿಗಣಿಸಿದರೆ ಬಹುತೇಕರು ಪಿಂಚಣಿಯಿಂದ ವಂಚಿತರಾಗುತ್ತಾರೆ. ಬಿಪಿಎಲ್ ಕಾರ್ಡ್ ಸಹ ರದ್ದಾಗುತ್ತದೆ. ಈಗಿರುವ ಮಿತಿಯನ್ನು ಒಂದೂವರೆಯಿಂದ ಎರಡು ಲಕ್ಷಕ್ಕೆ ಹೆಚ್ಚಿಸಬೇಕು. ಬಿಪಿಎಲ್ ಕಾರ್ಡ್ ಪಡೆಯಲು 1.20 ರು. ಲಕ್ಷ ಮಿತಿಯನ್ನು 2 ಲಕ್ಷ ರು.ಗೆ ಏರಿಸಬೇಕು. ಈ ಎಲ್ಲ ಅಪಸವ್ಯಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ. ಅಲ್ಲಿಯೂ ಆಗದಿದ್ದರೆ ಸೌಲಭ್ಯ ವಂಚಿತ ಪಲಾನುಭವಿಗಳ ಜೊತೆ ವಿಧಾನಸೌಧಕ್ಕೂ ಮುತ್ತಿಗೆ ಹಾಕಲು ಸಿದ್ದ. ಕೂಡಲೇ ಸರ್ಕಾರ ರದ್ದು ಮಾಡಿರುವ ಕ್ರಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಮಾತನಾಡಿ, ರಾಜ್ಯ ಸರ್ಕಾರ ಮೂರೂವರೆ ವರ್ಷದಿಂದ ಒಂದಾದರೂ ಆಶ್ರಯ ಮನೆ ನೀಡಿಲ್ಲ. ಒಂದೇ ಒಂದು ಬಿಪಿಎಲ್ ಕಾರ್ಡ್ ನೀಡಿಲ್ಲ. ಬಗರ್ ಹುಕುಂ ಸಮಿತಿಯಿಂದ ಅರ್ಹರಿಗೆ ಒಂದು ಎಕರೆ ಜಮೀನು ನೀಡಿಲ್ಲ.ಬಡವರ ಪರವಾದ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆ ನಿಲ್ಲಿಸಿದೆ.ಮಹಿಳಾ ಅಭಿವೃದ್ದಿ ಬಗ್ಗೆ ಮಾತನಾಡುವ ಶಾಸಕ ತಮ್ಮಯ್ಯನವರೇ ಮೂರೂವರೆ ವರ್ಷದಿಂದ ಬಡವರ ಪರ ಕಾಳಜಿ ತೋರಿಸಿಲ್ಲ.ಇನ್ನಾದರೂ ತೋರಿಸಲು ಮುಂದಾಗಿ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಗುಣಸಾಗರ ವಿಜಯ್ ಕುಮಾರ್, ರವೀಂದ್ರ ಬೆಳವಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಚಿಕ್ಕದೇವನೂರು ರವಿ, ಈಶ್ವರಹಳ್ಳಿ ಮಹೇಶ್,ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗೇಗೌಡ,ಕಾರೇಹಳ್ಳಿ ರವಿ, ಪಾದಮನೆ ದಿನೇಶ್, ರಮೇಶ್ ಪಿಳ್ಳೇನಹಳ್ಳಿ,ರೈತ ಮೋರ್ಚಾ ಅಧ್ಯಕಗಷ ಕೇತುಮಾರನಹಳ್ಳಿ ಉಮೇಶ್, ಎಸ್.ಸಿ.ಎಸ್.ಟಿ. ಮೋರ್ಚಾ ಅಧ್ಯಕ್ಷ ನಂದೀಶ್ ಮದಕರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಝೆನ್ ಜೀ ಹಿಂಸೆ : ಸಂಸತ್ತಿಗೆ ಉತ್ತರಿಸಲು ಶಾ ಸಿದ್ಧ
ರಾಜ್ಯದಲ್ಲಿ ''ತೇರೆ-ಮೇರೆ ಸಪ್ನೆ-ಕೂಡಿ ಬಾಳೋಣ'' ಯೋಜನೆ ಜಾರಿ: ಸಿಎಸ್‌