- ಕರ್ನಾಟಕದಲ್ಲಿ ಲಾರಿ ಚಾಲಕರು, ಮಾಲೀಕರಿಗೆ ಅಧಿಕಾರಿಗಳಿಂದ ಅತೀವ ಸಮಸ್ಯೆ: ಅಧ್ಯಕ್ಷ ಸೈಯದ್ ಸೈಫುಲ್ಲಾ
- - - ಕನ್ನಡಪ್ರಭ ವಾರ್ತೆ ದಾವಣಗೆರೆಮಹಾರಾಷ್ಟ್ರ ರಾಜ್ಯದಲ್ಲಿ ಸಾರಿಗೆ ತನಿಖಾ ಠಾಣೆಗಳನ್ನು ರದ್ದುಪಡಿಸಿದಂತೆ ಕರ್ನಾಟಕದಲ್ಲೂ ಆರ್‌ಟಿಒ ತನಿಖಾ ಠಾಣೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಸೈಫುಲ್ಲಾ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2025ರ ಏ.15ರಿಂದ ಮಹಾರಾಷ್ಟ್ರದ ಸಾರಿಗೆ ಇಲಾಖೆ ತನಿಖಾ ಠಾಣೆಗಳನ್ನು ತೆರವುಗೊಳಿಸುವ ದಿಟ್ಟ ಕ್ರಮವನ್ನು ಅಲ್ಲಿನ ಸಿಎಂ ದೇವೇಂದ್ರ ಫಡ್ನವೀಸ್ ಕೈಗೊಂಡಿದ್ದಾರೆ. ಸಾರಿಗೆ ಉದ್ಯಮ ನಡೆಸುವ ಲಾರಿ ಮಾಲೀಕರಿಗೆ ಆರ್‌ಟಿಒ ತನಿಖಾ ಠಾಣೆಗಳಿಂದ ತೀವ್ರ ತೊಂದರೆಯಾಗುತ್ತದೆ. ಅನವಶ್ಯಕವಾಗಿ ಲಾರಿಗಳನ್ನು ತಡೆಯುವುದು, ವಾಹನಗಳ ದಾಖಲಾತಿಗಳನ್ನು ವಿನಾಕಾರಣ ತೆಗೆದುಕೊಂಡು ಹೋಗುವುದು, ಲಾರಿ ಚಾಲಕರಿಂದ ಹಣಕ್ಕೆ ಬೇಡಿಕೆ ಇಡುವುದು ನಡೆಯುತ್ತಿದೆ. ಹಣ ಕೊಡದಿದ್ದರೆ ಇಲ್ಲಸಲ್ಲದ ಕಾನೂನು ನೆಪ ಹೇಳಿ, ಸಾವಿರಾರು ರು. ದಂಡ ವಿಧಿಸಿ, ತೊಂದರೆ ಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಲಾರಿ ಚಾಲಕರು, ಮಾಲೀಕರ ಸಂಕಷ್ಟ ಅರಿತ ಮಹಾರಾಷ್ಟ್ರ ಮುಖ್ಯಮಂತ್ರಿ ಅಲ್ಲಿನ ಎಲ್ಲ ಆರ್‌ಟಿಒ ತನಿಖಾ ಠಾಣೆಗಳನ್ನು ರದ್ದುಪಡಿಸಲು ಕ್ರಮ ಕೈಗೊಂಡಿದ್ದಾರೆ ಎಂದರು.ಆರ್‌ಟಿಒ ತನಿಖಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮೋಟಾರು ವಾಹನ ನಿರೀಕ್ಷಕರು ತಮ್ಮ ಕಚೇರಿಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿ, ಬಾಕಿ ಇರುವ ತೆರಿಗೆ, ಎಫ್‌ಸಿ ಹಾಗೂ ಸಾರಿಗೆ ಸುಧಾರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಇಂತಹ ತನಿಖಾ ಠಾಣೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರುವ ರಾಜಸ್ವದ 3 ಪಟ್ಟು ಹೆಚ್ಚಿನ ಆದಾಯ ಬರುವುದರಲ್ಲಿ ಅನುಮಾನ ಇಲ್ಲ. ಈಗ ಎಲ್ಲವೂ ಆನ್‌ಲೈನ್ ಸೇವೆ ಆಗಿರುವುದರಿಂದ ಇಂತಹ ತನಿಖಾ ಠಾಣೆಗಳ ಅಗತ್ಯವೂ ಇಲ್ಲ ಎಂದು ಸೈಯದ್ ಸೈಫುಲ್ಲಾ ತಿಳಿಸಿದರು.
ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅಧ್ಯಕ್ಷ ಕೆ.ಎಸ್.ಮಲ್ಲೇಶಪ್ಪ, ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಕೆ.ಮಲ್ಲಿಕಾರ್ಜುನ, ಎಂ.ಆರ್.ಮಹೇಶ, ಜಿಲಾನ್ ಬೇಗ್, ಎಸ್.ಬಸವರಾಜ, ಸತೀಶ, ಖಾಸಗಿ ವಾಹನ ಚಾಲನಾ ತರಬೇತಿ ಶಾಲೆಗಳ ಸಂಘದ ಈಶ್ವರ, ಬಿ.ಎಚ್.ಭೀಮಪ್ಪ ಇತರರು ಇದ್ದರು.- - -
ಕೋಟ್ ಸಾರಿಗೆ ಉದ್ಯಮ ನಡೆಸುವ ಲಾರಿ ಮಾಲೀಕರಿಗೆ ಆರ್‌ಟಿಒ ತನಿಖಾ ಠಾಣೆಗಳಿಂದ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ರಾಜ್ಯದ ಝಳಕಿ, ಅತ್ತಿಬೆಲೆ, ಕೊಗ್ಗನಹಳ್ಳಿ, ತೊಂಡಬಾವಿ, ಚಾಮರಾಜ ನಗರ, ಹಗರಿ, ಮಂಗಳೂರು ಆರ್‌ಟಿಒ ತನಿಖಾ ಠಾಣೆಗಳನ್ನು ಮಹಾರಾಷ್ಟ್ರ ಮಾದರಿಯಲ್ಲಿ ರದ್ದುಪಡಿಸಬೇಕು- ಸೈಯದ್ ಸೈಫುಲ್ಲಾ, ಅಧ್ಯಕ್ಷ
- - - -12ಕೆಡಿವಿಜಿ61.ಜೆಪಿಜಿ:ಆರ್‌ಟಿಒ ತನಿಖಾ ಠಾಣೆ ರದ್ದುಗೊಳಿಸುವಂತೆ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸೈಯದ್ ಸೈಫುಲ್ಲಾ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.