ಕನ್ನಡಪ್ರಭ ವಾರ್ತೆ ಚಾಮರಾಜನಗರಸಮಾಜಿಕ ಪಿಡುಗಾಗಿರುವ ಜೀತ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್ ತಿಳಿಸಿದರು.
ನಗರದ ಜಿಪಂನ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜೀತ ಪದ್ಧತಿ ನಿರ್ಮೂಲನೆಗೆ ರಾಜ್ಯಾದ್ಯಂತ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳಾಗಿದ್ದರೂ ಜೀತ ಪದ್ಧತಿ ಇನ್ನೂ ಜೀವಂತವಾಗಿರುವುದು ಮಾನವೀಯ ಬದುಕಿನ ದುರಂತವಾಗಿದೆ. ಬಲವಂತದ ದುಡಿಮೆ, ಮಾನವ ಕಳ್ಳ ಸಾಗಣೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ. ಮಕ್ಕಳು, ಆರ್ಥಿಕ ದುರ್ಬಲರು ಜೀತ ಪದ್ಧತಿಗೆ ಒಳಗಾಗುತ್ತಿದ್ದಾರೆ. ನಮ್ಮ ಸುತ್ತಲಿನ ಪರಿಸರದಲ್ಲಿ ಜೀತ ನಿವಾರಣೆಗೆ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದರು.ಜಿಲ್ಲೆಯಲ್ಲಿ ಈ ಹಿಂದೆ ಜೀತ ಪ್ರಕರಣಗಳಿದ್ದರೂ ಇತ್ತೀಚೆಗೆ ಜೀತ ಪದ್ಧತಿ ಕಂಡುಬಂದಿಲ್ಲ. ಜೀತದಲ್ಲಿ ತೊಡಗಿರುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಸಂವಿಧಾನದಡಿಯಲ್ಲಿ ಎಲ್ಲರನ್ನು ಘನತೆ, ಗೌರವದಿಂದ ನಡೆಸಿಕೊಳ್ಳಬೇಕು. ಎಲ್ಲರೂ ಸಂವಿಧಾನ ಬದ್ಧವಾಗಿ ಕೆಲಸ ಮಾಡಬೇಕು ಆಗಮಾತ್ರ ಜೀತ ಪದ್ದತಿಯನ್ನು ಬೇರು ಸಮೇತ ಕೀಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಜೀತ ಪದ್ಧತಿ ನಿರ್ಮೂಲನೆಯ ಪ್ರತಿಜ್ಞಾ ವಿಧಿ ಬೋಧಿಸಿ, ಜೀತ ವಿಮುಕ್ತಿಯ ಸಂಕೋಲೆ ಬಿಡಿಸುವ ಪ್ರತಿಕೃತಿ ಅನಾವರಣಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಜಾತೀಯತೆ, ಬಾಲ್ಯವಿವಾಹ, ಬಾಲಕಾರ್ಮಿಕ ಹಾಗೂ ಜೀತದಂತಹ ಅನಿಷ್ಠ ಪದ್ದತಿಗಳ ವಿರುದ್ಧ ಜಾಗೃತಿ ಬಗ್ಗೆಯೇ ಇನ್ನೂ ಮಾತನಾಡುತ್ತಿದ್ದೇವೆ. ಜೀತ ಎಂದರೇ ಕಾಲಿಗೆ ಚೈನು ಹಾಕಬೇಕೆಂದೇನು ಇಲ್ಲ. ಅದು ಬೇರೆ ಯಾವುದೇ ರೂಪದಲ್ಲಿಯೂ ಇರಬಹುದು. ಅರಿವು ಮೂಡಿಸಿ ಆಗಿದೆ, ಇನ್ನೇನಿದ್ದರೂ ಪ್ರಕರಣಗಳು ಕಂಡುಬಂದರೆ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.ಏನಾದರೂ ಆಗು, ಮೊದಲು ಮಾನವನಾಗು ಎಂಬಂತೆ ಮನುಷ್ಯತ್ವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಜೀತ ಪ್ರಕರಣಗಳು ಕಂಡುಬಂದಲ್ಲಿ ಅಧಿಕಾರಿಗಳು ಧೈರ್ಯವಾಗಿ ಮಾಹಿತಿ ನೀಡಿ. ಬಳಿಕ ಸಹಾಯಹಸ್ತ ನೀಡಿ ಅವರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗೋಣ. ಜೀತ ಪದ್ಧತಿ ನಿರ್ಮೂಲನೆಗೆ ಯಾವುದೇ ಸಮುದಾಯ ಮುಕ್ತವಾಗಿ ಮಾತನಾಡಬೇಕು ಎಂದು ಡೀಸಿ ಶಿಲ್ಪಾನಾಗ್ ತಿಳಿಸಿದರು. ಜೀವಿಕ ಜಿಲ್ಲಾ ಸಂಚಾಲಕ ಜಿ.ಕೆ. ಕುನ್ನಹೊಳಿಯಯ್ಯ ಮಾತನಾಡಿ, 1976ರಲ್ಲಿ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಗೆ ಬಂದಿದೆ. ಕಡಿಮೆ ಕೂಲಿ ನೀಡಿ ಹೆಚ್ಚಿನ ಸಮಯ ದುಡಿಸಿಕೊಳ್ಳುವುದು ಜೀತವಾಗಿದೆ. ಜೀತ ವಿಮುಕ್ತರಿಗೆ ಒಂದು ಮನೆ, ಒಂದು ಎಕರೆ ಜಮೀನು, 30 ಸಾವಿರ ರು. ಪರಿಹಾರ ಧನ ಹಾಗೂ ಕಾರ್ಪೋರೇಟ್‌ನಿಂದ 50 ಸಾವಿರ ರು. ಪರಿಹಾರ ಸಿಗಲಿದೆ. ಜೀತ ಪದ್ಧತಿ ನಿವಾರಣೆಗೆ ಜೀತ ವಿಮುಕ್ತ ಕರ್ನಾಟಕ ಸಂಸ್ಥೆಯು ಜಿಲ್ಲಾದ್ಯಂತ ಕಾರ್ಯಪ್ರವೃತ್ತವಾಗಿದೆ ಎಂದರು. ಜಿಲ್ಲಾ ಬಾಲ ಕಾರ್ಮಿಕ ಸೊಸೈಟಿಯ ಯೋಜನಾ ನಿರ್ದೇಶಕ ಮಹೇಶ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ವೀಣಾ ಜೀತ ಪದ್ಧತಿ ನಿರ್ಮೂಲನೆ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಡಿಸಿ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ಏರ್ಪಡಿಸಲಾಗಿದ್ದ ಜೀತ ಪದ್ದತಿ ನಿರ್ಮೂಲನೆ ಕುರಿತ ಜಾಗೃತಿ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್, ಎಡಿಸಿ ಗೀತಾ ಹುಡೇದ ಅವರು ಚಾಲನೆ ನೀಡಿದರು.