ವಿಶೇಷ ಗ್ರಾಮಸಭೆಗೆ ಅಧಿಕಾರಿಗಳ ಗೈರು: ಹೇರೂರಲ್ಲಿ ರಸ್ತೆ ತಡೆ

KannadaprabhaNewsNetwork | Published : Sep 14, 2024 1:48 AM

ಸಾರಾಂಶ

ಬಾಳೆಹೊನ್ನೂರು, ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಕೆ ಹಾಗೂ ಒತ್ತುವರಿ ತೆರವು ಆದೇಶದ ವಿರುದ್ಧ ಸಮೀಪದ ಹೇರೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಕರೆದಿದ್ದ ವಿಶೇಷ ಗ್ರಾಮಸಭೆಗೆ ಅಹವಾಲು ಸ್ವೀಕರಿಸಲು ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ದಿಢೀರ್‌ ರಸ್ತೆ ತಡೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಕೆ ಹಾಗೂ ಒತ್ತುವರಿ ತೆರವು ಆದೇಶದ ವಿರುದ್ಧ ಸಮೀಪದ ಹೇರೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಕರೆದಿದ್ದ ವಿಶೇಷ ಗ್ರಾಮಸಭೆಗೆ ಅಹವಾಲು ಸ್ವೀಕರಿಸಲು ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ದಿಢೀರ್‌ ರಸ್ತೆ ತಡೆ ನಡೆಸಿದರು.ಹೇರೂರು ಗ್ರಾಪಂನಲ್ಲಿ ಅಧ್ಯಕ್ಷ ಎಚ್.ಸಿ.ಅಶ್ವತ್ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಕೊಪ್ಪ ತಹಸೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ದಿಢೀರ್‌ ಶೃಂಗೇರಿ-ಬಾಳೆಹೊನ್ನೂರು ಮುಖ್ಯರಸ್ತೆಗೆ ಆಗಮಿಸಿ ತಹಸೀಲ್ದಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ, ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ರಸ್ತೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆ ತಡೆ ಮಾಡಿ ವಾಹನಗಳು ಸಂಚರಿಸದಂತೆ ತಡೆದರು.ಮಲೆನಾಡಿನಲ್ಲಿ ಸೂಕ್ಷ್ಮ ಪರಿಸ್ಥಿತಿಯಿದ್ದು, ಜನರ ನೆತ್ತಿಯ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಮಲೆನಾಡಿಗೆ ಮಾರಕ ವಾದ ಯೋಜನೆಗಳ ವಿರುದ್ಧ ಜನಾಭಿಪ್ರಾಯ ಸಂಗ್ರಹಕ್ಕೆ ವಿಶೇಷ ಗ್ರಾಮಸಭೆ ಕರೆಯಲಾಗಿದೆ. ಅಧಿಕಾರಿಗಳಿಗೆ ಈ ವಿಷಯ ಗೊತ್ತಿದ್ದರೂ ಆಗಮಿಸದೆ ಬೇಜವಾಬ್ದಾರಿ ತೋರಿದ ತಹಸೀಲ್ದಾರ್ ಆಗಮಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಪಟ್ಟು ಹಿಡಿದರು.ಬಾಳೆಹೊನ್ನೂರು ಪಿಎಸ್‌ಐ ರವೀಶ್ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿ ಆದರೆ ರಸ್ತೆ ತಡೆ ಮಾಡುವುದು ಬೇಡ. ಇದರಿಂದ ಸಾರ್ವಜನಿಕರಿಗೆ ತೊಂದರೆ. ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಡಿ ಎಂದು ಮನವಿ ಮಾಡಿದರು. ಆದರೂ ಕೂಡ ಪಿಎಸ್‌ಐ ಮನವಿಗೆ ಓಗೊಡದೆ ಗ್ರಾಮಸ್ಥರು ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.ಬಳಿಕ ಕೊಪ್ಪದಿಂದ ತಹಸೀಲ್ದಾರ್ ಲಿಖಿತಾ ಮೋಹನ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಅರಣ್ಯ ಒತ್ತುವರಿ ತೆರವು, ಸೆಕ್ಷನ್ 4, ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತು ಸೆ.23ರಂದು ಉಪವಿಭಾಗಾಧಿಕಾರಿ, ಡಿಎಫ್‌ಒ ನೇತೃತ್ವದಲ್ಲಿ ಸಭೆ ನಡೆಸಿ ಜಂಟಿ ಸರ್ವೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಯಾವ ದಿನಾಂಕದಂದು ಅರಣ್ಯ, ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡುತ್ತೇವೆ ಎಂದು ಪ್ರಕಟಿಸುತ್ತೇವೆ ಎಂದು ತಿಳಿಸಿದರು.ಸೆ.25 ರೊಳಗೆ ಜಂಟಿ ಸರ್ವೆ ಕುರಿತು ತೀರ್ಮಾನ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಕೊಪ್ಪದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಘೋಷಿಸಿದರು. ಇದರೊಂದಿಗೆ ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು ಎಂದು ನಿರ್ಣಯ ಕೈಗೊಂಡು, ಸರ್ಕಾರಕ್ಕೆ ರವಾನಿಸಿದರು.ಮುಖಂಡರಾದ ಕೆ.ಎಸ್.ರವೀಂದ್ರ ಕುಕ್ಕುಡಿಗೆ, ಎ.ಸಿ.ಸಂತೋಷ್ ಅರೆನೂರು, ಎಚ್.ಸಿ.ಅಶ್ವಥ್, ಸುಕುಮಾರ್, ಸಿ.ಯು. ನಟರಾಜ್, ಡಿ.ಎನ್.ಜಗದೀಶ್ ದಿಡಿಗೆಮನೆ, ತಿಮ್ಮಪ್ಪಹೆಗ್ಡೆ, ಎನ್.ಎ.ಸಂಜೀವ, ನಾಗೇಶ್ ಅಮೀನ್, ಸುಧಾಕರ್ ದಿಡಿಗೆಮನೆ, ಎ.ಆರ್.ಸುರೇಂದ್ರ ಮತ್ತಿತರರು ಹಾಜರಿದ್ದರು.೧೩ಬಿಹೆಚ್‌ಆರ್ ೬: ಬಾಳೆಹೊನ್ನೂರು ಸಮೀಪದ ಹೇರೂರಿನಲ್ಲಿ ರಸ್ತೆ ತಡೆ ನಡೆಸಿದ ಗ್ರಾಮಸ್ಥರು.

Share this article