ಕೆಸಿಡಿ ಸಮಸ್ಯೆ ಪರಿಹಾರಕ್ಕೆ ಎಬಿವಿಪಿ ಆಗ್ರಹ

KannadaprabhaNewsNetwork |  
Published : Oct 07, 2026, 02:15 AM IST
ಕರ್ನಾಟಕ ಕಾಲೇಜಿನಲ್ಲಿ ಕಂಡು ಬರುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

2026-27ನೇ ಶೈಕ್ಷಣಿಕ ವರ್ಷದಲ್ಲಿ ವಿವಿಯಿಂದ ಪ್ರವೇಶಾತಿ ಶುಲ್ಕ ಏರಿಕೆ ವಿರುದ್ಧ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. ವಿದ್ಯಾರ್ಥಿಗಳ ಮನವಿಗೆ ಒಪ್ಪಿಗೆ ಸೂಚಿಸಿದ ವಿವಿ ಈ ವರೆಗೆ ಶುಲ್ಕ ಮರುಪಾವತಿಸಿಲ್ಲ.

ಧಾರವಾಡ:

ಕರ್ನಾಟಕ ಕಾಲೇಜಿನಲ್ಲಿ ಕಂಡುಬರುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ನಿಗದಿತ ಶುಲ್ಕಕ್ಕಿಂತ ಹೆಚ್ಚು ಪಡೆದಿರುವ ಪ್ರವೇಶ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರಳಿ ನೀಡುವ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳವಾರ ಕರ್ನಾಟಕ ಕಾಲೇಜು ಎದುರು ಪ್ರತಿಭಟಿಸಿ ಕುಲಪತಿಗೆ ಮನವಿ ಸಲ್ಲಿಸಿತು.

ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಸಚಿನ ಕೋಟ್ಯಾಳ ಮಾತನಾಡಿ, 2026-27ನೇ ಶೈಕ್ಷಣಿಕ ವರ್ಷದಲ್ಲಿ ವಿವಿಯಿಂದ ಪ್ರವೇಶಾತಿ ಶುಲ್ಕ ಏರಿಕೆ ವಿರುದ್ಧ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. ವಿದ್ಯಾರ್ಥಿಗಳ ಮನವಿಗೆ ಒಪ್ಪಿಗೆ ಸೂಚಿಸಿದ ವಿವಿ ಈ ವರೆಗೆ ಶುಲ್ಕ ಮರುಪಾವತಿಸಿಲ್ಲ. ಅಲ್ಲದೇ, ಕಾಲೇಜಿನ ಆವರಣದಲ್ಲಿರುವ ಶೌಚಾಲಯಗಳು ಹೀನಾಯ ಸ್ಥಿತಿಯಲ್ಲಿವೆ. ಸಮರ್ಪಕ ನೀರಿನ ಪೂರೈಕೆ ಇಲ್ಲದೆ, ಸರಿಯಾದ ಬಾಗಿಲುಗಳ ಕೊರತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಂಥಾಲಯದಲ್ಲಿರುವ ಪುಸ್ತಕಗಳ ಲಭ್ಯತೆಯ ಸಮಸ್ಯೆ ಉಂಟಾಗಿದೆ. ಹೊಸ ಪುಸ್ತಕಗಳನ್ನು ತರುಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹೊಸ ಪುಸ್ತಕಗಳನ್ನು ಒದಗಿಸಿ ಬಳಕೆಗೆ ಅವಕಾಶ ನೀಡಬೇಕು. ಗ್ರಂಥಾಲಯದ ಕುರ್ಚಿಗಳು ಮುರಿದಿದ್ದು, ಧೂಳು ಹಿಡಿದ ಪರಿಸ್ಥಿತಿಯಲ್ಲಿ ಗ್ರಂಥಾಲಯವಿದೆ. ಹಾಗೆಯೇ ಕಾಲೇಜಿನ ಮುಖ್ಯ ಕಟ್ಟಡದ ಬಲಭಾಗದಲ್ಲಿ ಹಲವು ದಿನಗಳಿಂದ ಕೊಳಚೆ ನೀರಿನ ಗುಂಡಿ ಸೃಷ್ಟಿಯಾಗಿದೆ. ತರಗತಿಗಳಲ್ಲಿ ಅಳವಡಿಸಲಾದ ಇ-ಪ್ರೊಜೆಕ್ಟರ್‌ಗಳಿದ್ದರೂ ಅವುಗಳಿಂದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಕಾಲೇಜು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹಲವು ಬಾರಿ ಪ್ರಯೋಗಾಲಯದ ಸೌಲಭ್ಯಕ್ಕಾಗಿ ಬೇಡಿಕೆ ಸಲ್ಲಿಸಿದ್ದರೂ, ಇಂದಿಗೂ ವಿಭಾಗಕ್ಕೆ ಪ್ರತ್ಯೇಕ ಪ್ರಯೋಗಾಲಯ ಮತ್ತು ಅಗತ್ಯ ಮೂಲಸೌಕರ್ಯಗಳಿಲ್ಲ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳ ಅಭಿವೃದ್ಧಿಗೆ ಪ್ರಯೋಗಾಲಯದ ಸೌಲಭ್ಯ ಅತ್ಯಗತ್ಯವಾಗಿದ್ದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ, ರಾಘವೇಂದ್ರ ದೇಸಾಯಿ, ನಾಗದತ್ತ ಒಡೆಯರ, ಸೋಹನ್ ಮಲ್ನಾಡ, ಪ್ರಜ್ವಲ್ ಹೂಗಾರ, ಲಕ್ಷ್ಮೀನಾರಾಯಣ್, ದತ್ತು ದೇವರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೂರಿನಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗೆ ಪರದಾಟ
ಹಾವೇರಿ ತಾಲೂಕಲ್ಲಿ ಬಿರುಗಾಳಿ, ಮಳೆಗೆ ನೆಲಕಚ್ಚಿದ ಕಬ್ಬು, ಮೆಕ್ಕೆಜೋಳ