ಎನ್‌ಇಪಿ ಹಿಂಪಡೆಯಲಿರುವ ಸರ್ಕಾರ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ

KannadaprabhaNewsNetwork | Published : May 15, 2024 1:34 AM

ಸಾರಾಂಶ

ಕಲಬುರಗಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರಿಂದ ಹೋರಾಟ. ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಪಡಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಹಿಂದೆ ತೆಗೆದುಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಕಲಬುರಗಿ ನಗರದಲ್ಲಿನ ಡಿಸಿ ಕಚೇರಿ ಎದರು ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಹನುಮಂತ ಬಗಲಿ ಮಾತನಾಡಿ,

ದೇಶದಲ್ಲಿ ಭಾರತದ ಶಿಕ್ಷಣ ನೀತಿ ಜಾರಿಗೆ ಬರಬೇಕು. ಮಕ್ಕಳು ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣವನ್ನ ಪಡೆಯಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಸರ್ಕಾರ ಜಾರಿಗೆ ತಂದಿದ್ದು ಅದನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇಂದಿನ ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಹಿಂಪಡೆಯುತ್ತೇವೆ ಎಂದು ಹೇಳಿದ್ದು, ಸರ್ಕಾರದ ನಡೆಯನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ರೀತಿಯ ಶಿಕ್ಷಣ ಪದ್ಧತಿ ಇರಬೇಕು. ಆ ಶಿಕ್ಷಣ ಪದ್ಧತಿ, ಭಾರತೀಯ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಇನ್ನಿತರ ಕೌಶಲ್ಯವನ್ನು ನೀಡುವ ಉದ್ದೇಶ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಮುಂದಿನ 20-25 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಯನ್ನು ಮುಂದಿಟ್ಟುಕೊಂಡು ಈ ನೀತಿಯನ್ನ ಹಲವಾರು ಶಿಕ್ಷಣ ತಜ್ಞರು ತಯಾರಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ರಾಷ್ಟ್ರೀಯತೆಯನ್ನ ತುಂಡು ಮಾಡಿ ಪ್ರತ್ಯೇಕತೆಯ ಹೆಜ್ಜೆಯನ್ನ ಇಡುತ್ತಿರುವ ನೀತಿ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗುತ್ತಿದೆ ಎಂದು ಬಗಲಿ ಹೇಳಿದರು.

ರಾಜ್ಯದ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಈ ಎಲ್ಲ ವಿಷಯವನ್ನು ಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಧ್ಯಂತರ ವರದಿಯ ಪ್ರಕಾರ ಹಿಂದಿನ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುತ್ತೇವೆ ಎಂಬ ಆದೇಶವನ್ನು ನೀಡಿರುವುದು ಎಬಿವಿಪಿ ಖಂಡಿಸುತ್ತದೆ. ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಎನ್ಇಪಿ ಯಲ್ಲಿ ಆಗಿರುವ ಲೋಪದೋಷಗಳನ್ನ ಸರಿಮಾಡಿ ರಾಜ್ಯದಲ್ಲಿ ಸಮರ್ಪಕವಾದ ಎನ್‌ಇಪಿ ಅನುಷ್ಠಾನ ಮಾಡಿ ಈ ದೇಶದ ಶಿಕ್ಷಣ ಪದ್ಧತಿಯೊಂದಿಗೆ ಕರ್ನಾಟಕ ರಾಜ್ಯವನ್ನ ತೆಗೆದುಕೊಂಡು ಹೋಗುವ ಮಹತ್ತರ ಜವಾಬ್ದಾರಿಯನ್ನ ಮಾಡಬೇಕೆಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.

ಒಂದು ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ರದ್ದು ಪಡಿಸಿದ್ದೆ ಆದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರಾಂತ ಫಾರ್ಮೈಸಂ ಪ್ರಮುಖರಾದ ಬಸವರಾಜ್ ಗುರುಗುಂಟಿ, ದಿಲೀಪ್ ದಾನೂರ, ಗುರು ಪೂಜಾರಿ, ಶಾಂತಕುಮಾರ್, ನಗರ ಕಾರ್ಯದರ್ಶಿ ಮನೋಜ್, ಶಿವಾನಿ, ತರುಣ, ಅರುಣ ಪ್ರಮುಖರು ಉಪಸ್ಥಿತರಿದ್ದರು.

Share this article