ಕನ್ನಡಪ್ರಭ ವಾರ್ತೆ ಹಾಸನ
ನಮ್ಮ ರಾಜ್ಯದಲ್ಲಿ ಹಿಂದಿನ ೩ ವರ್ಷಗಳ ಸರ್ಕಾರದ ವರದಿ ಪ್ರಕಾರ ಅರ್ಜಿ ಸಲ್ಲಿಸಿದ ೧೦೦ ವಿದ್ಯಾರ್ಥಿಗಳಲ್ಲಿ ೪೦ರಿಂದ ೫೦ ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿದೆ. ಇನ್ನುಳಿದ ವಿದ್ಯಾರ್ಥಿಗಳು ವಸತಿ ನಿಲಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಹೊಸ ವಸತಿ ನಿಲಯಗಳನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸುತ್ತದೆ. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ನೀಡುತ್ತಿದ್ದ ಕಿಟ್‌ಗಳು ತಲುಪುತ್ತಿಲ್ಲ, ೪೦ - ೫೦ ವಿದ್ಯಾರ್ಥಿಗಳಿಗೆ ಸೇರಿ ೨-೩ ಶೌಚಾಲಯಗಳು ಇವೆ. ೧೦೦ ವಿದ್ಯಾರ್ಥಿಗಳು ಇರಬೇಕಾದ ವಸತಿ ನಿಲಯಗಳಲ್ಲಿ ೧೪೦ - ೧೫೦ ವಿದ್ಯಾರ್ಥಿಗಳನ್ನ ಇರಿಸುವಂತಾಗಿದೆ. ಪ್ರತಿ ತಿಂಗಳು ಊಟದ ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಗೆ ೧,೮೫೦ ರು. ಮಾತ್ರ ನೀಡಲಾಗುತ್ತಿದೆ. ಈ ಹಣದಲ್ಲಿ ಡಯಟ್ ಚಾರ್ಟ್‌ನಲ್ಲಿ ಇರುವಂತೆ ಸರಿಯಾಗಿ ಆಹಾರವನ್ನು ಕೊಡುವುದಕ್ಕೆ ಆಗುವುದಿಲ್ಲ ಕಾರಣ ಸರ್ಕಾರ ಈ ಹಣವನ್ನು ಹೆಚ್ಚಳ ಮಾಡಬೇಕು. ಈ ರೀತಿ ಹಲವಾರು ಸಮಸ್ಯೆಗಳು ರಾಜ್ಯದ ನಿಲಯಗಳಲ್ಲಿದ್ದು ರಾಜ್ಯ ಸರ್ಕಾರ ತಕ್ಷಣವೇ ಹಾಸ್ಟೆಲ್‌ಗಳ ಮೂಲಭೂತ ಸೌಲಭ್ಯಕ್ಕೆ ವಿಶೇಷ ಅನುದಾನವನ್ನ ನೀಡಿ ಸುವ್ಯವಸ್ಥಿತ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸರ್ಕಾರಿ ಸಾರಿಗೆ ಬಸುಗಳಲ್ಲಿ ಪ್ರಯಾಣಿಕರ ದಟ್ಟಣೆ ದಿನ ದಿನಕ್ಕೆ ಹೆಚ್ಚುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಆದ್ದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರಯಾಸದಿಂದ ಜೀವ ಕೈಯಲ್ಲಿಡಿದು ಪ್ರಯಾಣಿಸುವ ಸಂದರ್ಭ ಪ್ರತಿನಿತ್ಯ ನಾವು ಕಾಣುವ ಸಾಮಾನ್ಯ ಸಂಗತಿ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಶಾಲಾ ಕಾಲೇಜುಗಳ ಸಮಯಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ನಂಬಿ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ಶಿಕ್ಷಣಕ್ಕೆ ಸರ್ಕಾರಗಳು ನೀಡುವ ವಿದ್ಯಾರ್ಥಿವೇತನ ಸಹಕಾರಿಯಾಗಲಿದೆ ಎಂಬ ಭಾವನೆಯೊಂದಿಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿವೇತನ ಜಮೆಯಾಗದೆ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದು. ವಿದ್ಯಾಸಿರಿ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗದೇ ಇರುವುದು, ರೈತ ವಿದ್ಯಾನಿಧಿಯನ್ನ ರದ್ದುಗೊಳಿಸಿರುವುದು ಹಾಗೂ ಇನ್ನುಳಿದ ವಿದ್ಯಾರ್ಥಿ ವೇತನವು ಸರಿಯಾಗಿ ವಿದ್ಯಾರ್ಥಿಗಳಿಗೆ ಜಮೆ ಮಾಡದೆ ವಿದ್ಯಾರ್ಥಿ ವಿರೋಧಿ ನೀತಿಯನ್ನ ಅನುಸರಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ತಕ್ಷಣವೇ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಎಚ್.ಕೆ. ಪ್ರವೀಣ್, ಚಿರಂತ್ ಇತರರು ಉಪಸ್ಥಿತರಿದ್ದರು.