ಅತಿಥಿ ಉಪನ್ಯಾಸಕರ ಮುಷ್ಕರದಿಂದ ಶೈಕ್ಷಣಿಕ ಚಟುವಟಿಕೆ ಕುಂಠಿತ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಪದೇ ಪದೇ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿರುವುದರಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಕಾಲೇಜಿನಲ್ಲಿ ಪೂರ್ಣಾವಧಿ ಉಪನ್ಯಾಸಕರಿಗಿಂತಲೂ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸಹಜವಾಗಿ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಈ ಕುರಿತು ವಿವರ ಮಾಹಿತಿಗಳೊಂದಿಗೆ ಮೇಲಧಿಕಾರಿಗಳ ಗಮನ ಸೆಳೆಯಿರಿ. ತಾವೂ ಕೂಡ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡುವುದಾಗಿ ಶಾಸಕ ಮಾನೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಅತಿಥಿ ಉಪನ್ಯಾಸಕರ ಮುಷ್ಕರದಿಂದ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದ್ದು, ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನ ಸೆಳೆಯುವಂತೆ ಶಾಸಕ ಶ್ರೀನಿವಾಸ ಮಾನೆ ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಜಯಕುಮಾರ ಎಚ್.ಬಿ. ಅವರಿಗೆ ಸೂಚಿಸಿದರು.

ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪದೇ ಪದೇ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿರುವುದರಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಕಾಲೇಜಿನಲ್ಲಿ ಪೂರ್ಣಾವಧಿ ಉಪನ್ಯಾಸಕರಿಗಿಂತಲೂ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸಹಜವಾಗಿ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಈ ಕುರಿತು ವಿವರ ಮಾಹಿತಿಗಳೊಂದಿಗೆ ಮೇಲಧಿಕಾರಿಗಳ ಗಮನ ಸೆಳೆಯಿರಿ. ತಾವೂ ಕೂಡ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಕಾಲೇಜಿನ ಎದುರು ಬಸ್ ನಿಲುಗಡೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವಂತೆ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಶೆಟ್ಟರ ಗಮನ ಸೆಳೆದಾಗ ಮಧ್ಯಾಹ್ನ ೧ರಿಂದ ೩ ಗಂಟೆವರೆಗೆ ಬಸ್ ನಿಲುಗಡೆಗೆ ಸೂಚಿಸಲಾಗಿದೆ. ಯಾವ ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ ಎನ್ನುವ ಬಗೆಗೆ ಮಾಹಿತಿ ನೀಡಿದರೆ ಕ್ರಮ ಜರುಗಿಸುವ ಭರವಸೆ ನೀಡಿದರು.

ನಿಯಮಾವಳಿ ಅನುಸಾರ ನಿಯಮಿತವಾಗಿ ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸಭೆ ನಡೆಸಿ, ಸದಸ್ಯರ ಸಹಕಾರ, ಸಮನ್ವಯದೊಂದಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕಾಳಜಿ ವಹಿಸಿ. ಡಿಜಿಟಲ್ ಲೈಬ್ರರಿ ಮಾಡಿದರೆ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಗಮನ ಹರಿಸಿ ಎಂದು ಪ್ರಾಚಾರ್ಯ ಪ್ರೊ. ವಿಜಯಕುಮಾರ ಎಚ್.ಬಿ. ಅವರಿಗೆ ಶಾಸಕ ಮಾನೆ ಸೂಚಿಸಿದರು. ಕಾಲೇಜಿನಲ್ಲಿ ಪೂರಕ ಶೈಕ್ಷಣಿಕ ವಾತಾವರಣ ಸೃಷ್ಟಿಸಿ. ಸರಿಯಾಗಿ ತರಗತಿಗಳು ನಡೆಯುವಂತೆ ನಿಗಾ ವಹಿಸಿ ಎಂದೂ ಸೂಚನೆ ನೀಡಿದರು.

ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಪಿ.ಕೆ. ಪಾರಗಾಂವಕರ್, ತಮ್ಮಣ್ಣ ವೇದಂಭಟ್, ಫೈರೋಜ್‌ ಅಹ್ಮದ್ ಶಿರಬಡಗಿ, ಇಲಿಯಾಸ್ ಮಿಠಾಯಿಗಾರ, ನಾಸೀರಖಾನ ಮತ್ತಿಹಳ್ಳಿ, ಸಿಕಂದರ್ ವಾಲಿಕಾರ, ಮಾಲತೇಶ ಹುಲ್ಲಕ್ಕನವರ, ಡಿಗ್ಗಪ್ಪ ಲಮಾಣಿ ಭಾಗವಹಿಸಿದ್ದರು.

Share this article