ಕೆರೆಗಳ ಹೂಳೆತ್ತುವ ಕೆಲಸ ಚುರುಕುಗೊಳಿಸಿ: ಎಡೀಸಿ ಡಾ.ನಾಗರಾಜ್

KannadaprabhaNewsNetwork | Published : Jun 16, 2024 1:46 AM

ಸಾರಾಂಶ

ಕೆರೆಗಳಲ್ಲಿ ನೀರು ಎಷ್ಟು ತುಂಬುತ್ತದೆ ಅಷ್ಟನ್ನು ಬಿಟ್ಟ ಉಳಿದ ಖಾಲಿ ಜಾಗದಲ್ಲಿ ಗಿಡ ನೆಡಲು ಅರಣ್ಯ ಇಲಾಖೆಗೂ ಕೂಡ ನಿರ್ದೇಶನ ನೀಡಲಾಗಿದೆ. ಕೆರೆಗಳ ಸುತ್ತ ಪುನ: ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಲು ಕೆರೆಗಳ ಸುತ್ತ ಬಯೋ ಫೆನ್ಸಿಂಗ್ ಮಾಡಲು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳೆಗಾಲ ಪ್ರಾರಂಭವಾಗುತ್ತಿದ್ದು, ಹೂಳೆತ್ತುವ ಕೆಲಸ ಬಾಕಿ ಇರುವ ಕೆರೆಗಳನ್ನು ಪಟ್ಟಿ ಮಾಡಿ ಕೆಲಸ ಚುರುಕುಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜ್ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ 962 ಕೆರೆಗಳನ್ನು ಈಗಾಗಲೇ ಗುರುತಿಸಿದ್ದೇವೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಮಟ್ಟದ ಸಮಿತಿಯಿಂದ ನಿರ್ದೇಶನ ಬಂದಿರುವ ರೀತಿ ಹಾಗೂ ಉಚ್ಚ ನ್ಯಾಯಾಲಯದ ರೀತಿ ನಮ್ಮ ಜಿಲ್ಲೆಯಲ್ಲೂ ಕೂಡ ಒಂದು ಜಿಲ್ಲಾ ಮಟ್ಟದ ಸಮಿತಿಯನ್ನು ಮಾಡಿ ನಮ್ಮ ಜಿಲ್ಲಾ ವ್ಯಾಪ್ತಿಗೆ ಬರುವಂತಹ ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ಕಾವೇರಿ ನೀರಾವರಿ ನಿಗಮ ಇಲಾಖೆ, ಹೇಮಾವತಿ ಎಡದಂಡೆ ನಾಲಾ ವಿಭಾಗದ ವ್ಯಾಪ್ತಿಗೆ ಬರುವಂತಹ ಕೆರೆಗಳನ್ನು ಗುರುತಿಸಿ ಆಯಾ ಇಲಾಖೆ ಅವರು ಸರ್ವೇ ಕಾರ್ಯ ಕೈಗೊಂಡು ಸುಮಾರು 262 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನುಳಿದ ಕೆರೆಗಳ ತೆರವುಗೊಳಿಸುವ ಕಾರ್ಯವು ಪ್ರಗತಿಯಲ್ಲಿದೆ ಎಂದರು.

ಕೆರೆಗಳ ಸುತ್ತ ಗಿಡ ನೆಡಲು ಸೂಚನೆ:

ಕೆರೆಗಳಲ್ಲಿ ನೀರು ಎಷ್ಟು ತುಂಬುತ್ತದೆ ಅಷ್ಟನ್ನು ಬಿಟ್ಟ ಉಳಿದ ಖಾಲಿ ಜಾಗದಲ್ಲಿ ಗಿಡ ನೆಡಲು ಅರಣ್ಯ ಇಲಾಖೆಗೂ ಕೂಡ ನಿರ್ದೇಶನ ನೀಡಲಾಗಿದೆ. ಕೆರೆಗಳ ಸುತ್ತ ಪುನ: ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಲು ಕೆರೆಗಳ ಸುತ್ತ ಬಯೋ ಫೆನ್ಸಿಂಗ್ ಮಾಡಲು ತಿಳಿಸಿದರು.

3 ಅಡಿಗಿಂತ ಹೆಚ್ಚಿನ ಆಳ ತೆಗೆಯಬಾರದು:

ರೈತರು ತಮ್ಮ ಕೃಷಿ ಕೆಲಸಕ್ಕಾಗಿ ಕೆರೆಗಳ ಹೂಳೆತ್ತುವ ಕೆಲಸ ಮಾಡುತ್ತಿದ್ದರೆ ಅವರಿಗೆ ಅವಕಾಶ ಮಾಡಿಕೊಡಿ. ಆದರೆ 3 ಅಡಿಗಿಂತ ಹೆಚ್ಚು ಆಳ ತೆಗೆಯಬಾರದು ಹಾಗೂ ಯಾವುದೇ ರೀತಿ ಆರ್ಥಿಕ ವ್ಯವಹಾರದ ಕೆಲಸಗಳಿಗೆ ಬಳಸುವುದಕ್ಕೆ ಅವಕಾಶ ಮಾಡಿಕೊಡಬೇಡಿ, ಕೇವಲ ರೈತರು ಜಮೀನಿಗೆ ಮಣ್ಣು ತುಂಬಿಸುವುದಕ್ಕೆ, ನೀರು ಹಾಯಿಸುವ ಉದ್ದೇಶ ವಿದ್ದರೆ ಮಾತ್ರ ಅವಕಾಶ ಕೊಡಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಮ್ಮ ಕೆರೆ, ನಮ್ಮ ರಕ್ಷಣೆ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಆನಂದ ಮಾತನಾಡಿ, ವರ್ಷಗಳು ಉರುಳಿದಂತೆ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಿದೆ. ಮರಗಿಡಗಳನ್ನು ಕಡಿಯುತ್ತಿರುವುದು ಹಾಗೂ ಇರುವ ಕೆರೆಗಳನ್ನು ಒತ್ತುವರಿ ಮಾಡಿ ಕೆರೆ ಇಲ್ಲದಂತೆ ಮಾಡುತ್ತಿರುವುದು. ಇದರಿಂದ ಮಳೆ ಕಡಿಮೆಯಾಗುತ್ತಿದ್ದು ಬೇಸಿಗೆ ಸಮಯದಲ್ಲಿ ಜನರಿಗೆ ಜಾನುವಾರುಗಳಿಗೆ ನೀರಿನ ಕೊರತೆ ತುಂಬಾ ಆಗುತ್ತಿದೆ ಎಂದು ಹೇಳಿದರು.

ಇದೆಲ್ಲದಕ್ಕೂ ಪರಿಹಾರವೆಂದರೆ ಮರ- ಗಿಡಗಳನ್ನುಹೆಚ್ಚಾಗಿ ಬೆಳೆಸಬೇಕು. ಕೆರೆಗಳ ಹೂಳೆತ್ತಿಸಿ ನೀರು ಸಂಗ್ರಹಿಸಬೇಕು. ಇಂದಿನ ಪೀಳಿಗೆಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಸಹ ಅನುಕೂಲವಾಗುವಂತೆ ಮಾಡಿ ಕೆರೆಗಳ ರಕ್ಷಣೆ ಮಾಡಿ ಎಂದು ಹೇಳಿದರು.

ಸಭೆಯಲ್ಲಿ ಭೂ ದಾಖಲೆಗಳ ಶಾಖೆಯ ಉಪನಿರ್ದೇಶಕ ಉಮೇಶ್, ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇತರರಿದ್ದರು.

Share this article