ಡಂಬಳ: ಜೀವನ ನಮ್ಮ ಇಚ್ಛೆಯಂತೆ ನಡೆಯುವುದಿಲ್ಲ. ನಾವು ನಿಸರ್ಗಕ್ಕೆ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ನುಡಿದರು.
ನಮಗೆ ಯಾವತ್ತೂ ದುಃಖ ಬರಬಾರದೆಂದು ಪ್ರಾರ್ಥಿಸುತ್ತೇವೆ. ಅದಕ್ಕಾಗಿ ಜ್ಯೋತಿಷಿ, ದೇವಸ್ಥಾನಗಳಿಗೆ ತೆರಳಿ ದೇವರ ಮೊರೆ ಇಡುತ್ತೇವೆ. ಆದರೂ ನಮಗೆ ದುಃಖ ಸಿಗುವುದು. ಆದ್ದರಿಂದ ನಾವು ಸುಖ- ದುಃಖ ಜೀವನದಲ್ಲಿ ಸಾಮಾನ್ಯ. ಅವುಗಳನ್ನು ಸಮಭಾವದಿಂದ ಸ್ವೀಕರಿಸುವುದನ್ನು ಕಲಿಯಬೇಕು ಎಂದರು.
ನೆಗಳೂರಿನ ಗುರುಶಾಂತೇಶ್ವರ ಸ್ವಾಮಿಗಳು ಮಾತನಾಡಿ, ಹಾಲೇಶ್ವರ ಜಾತ್ರೆ ಬರೀ ಪ್ರಸಾದ ಮಾಡಿ ಹೋಗುವ ಜಾತ್ರೆಯಲ್ಲ. ಈ ಜಾತ್ರೆಯಲ್ಲಿ ಜ್ಞಾನ ದಾಸೋಹ ಸಿಗುತ್ತಿರುವುದು ಪ್ರತಿಯೊಬ್ಬರ ಬದುಕಿಗೆ ಪ್ರಯೋಜನಕಾರಿಯಾಗಿದೆ. ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸಂಸ್ಕಾರವನ್ನು ಕಲಿಸಬೇಕು ಎಂದರು.ಪೇಠಾಆಲೂರಿನ ಹಾಲೇಶ್ವರ ಶರಣರು ಮಾತನಾಡಿ, ಮಣ್ಣು, ನೀರು, ಗಾಳಿಯಷ್ಟೇ ಗುರುವಿನ ಆಶೀರ್ವಾದ ಮುಖ್ಯ. ದಾನ- ಧರ್ಮದ ಮನೋಭಾವವುಳ್ಳ ಕೆಲವು ಜನರಿಂದ ಮಾತ್ರ ಧರ್ಮ ಉಳಿದಿದೆ. ನಾನೇ ಮೇಲು, ನನ್ನಿಂದಲೇ ಎಲ್ಲ ಅನ್ನುವ ಭ್ರಮೆಯಲ್ಲಿ ಮನುಷ್ಯ ಬದುಕುತ್ತಿದ್ದಾನೆ. ಮುಂದೊಂದು ದಿನ ನಾವು ಅಳಿದು ಹೋಗುತ್ತೇವೆ. ನಾವು ಮಾಡಿದ ಕೆಲಸಗಳು ಶಾಶ್ವತವಾಗಲಿವೆ ಎಂಬುದನ್ನು ಅರಿತು ನಡೆಯಬೇಕು ಎಂದರು.
ಡಂಬಳ: ಡಂಬಳ ಹೋಬಳಿಯ ಪೇಠಾ ಆಲೂರಿನ ಹಾಲೇಶ್ವರ ಕೃಪಾಪೋಷಿತ ಶಿವಯೋಗಾಶ್ರಮದ 48ನೇ ಜಾತ್ರಾಮಹೋತ್ಸವದ ಲಘು ರಥೋತ್ಸವಕ್ಕೆ ಹಾಲೇಶ್ವರ ಶಿವಶರಣರು ಚಾಲನೆ ನೀಡಿದರು.ಗ್ರಾಮದಲ್ಲಿ ಗುರುವಾರ ಸಂಜೆ 6ಕ್ಕೆ ರಥೋತ್ಸವ ವಿವಿಧ ವಾದ್ಯಮೇಳಗಳ ಮೂಲಕ ವಿಜೃಂಭಣೆಯಿಂದ ಜರುಗಿತು. ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಜಾತ್ರಾ ಸಮಿತಿ ಸದಸ್ಯರು, ಮಹಿಳೆಯರು, ಯುವಕರು ಇದ್ದರು.