ಉದ್ಯೋಗ ಖಾತರಿ ನಡಿಗೆ, ಸಬಲತೆಯೆಡೆಗೆ ಅಭಿಯಾನ, ಯೋಜನೆಯ ಜಾಗೃತಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ನರೇಗಾ ಗ್ರಾಮೀಣ ಪ್ರದೇಶದ ರೈತರ, ಕೂಲಿಕಾರರ, ಮಹಿಳೆಯರ ಸಬಲತೆಗಾಗಿ ಜಾರಿಯಾದ ಯೋಜನೆಯಾಗಿದ್ದು, 100 ದಿನಗಳ ಕೆಲಸ ನಿರ್ವಹಿಸಬಹುದಾಗಿದೆ. ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದ ಭಾಗವಾಗಿ 2025-26ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಸಲಾಗುತ್ತಿದೆ. ಐಇಸಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ ಭೇಟಿ ನೀಡಿ ಕಾಮಗಾರಿಗಳ ಬೇಡಿಕೆ ಪಡೆಯಲಾಗುತ್ತಿದೆ. ಯೋಜನೆಯಡಿ ಗ್ರಾಪಂ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುವುದರಿಂದ, ಆದ್ಯತೆ ಮೇರೆಗೆ ಕಾಮಗಾರಿ ಬೇಡಿಕೆಯನ್ನು ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ ಮನೆ ಮನೆ ಭೇಟಿ ಮೂಲಕ ಅಥವಾ ಗ್ರಾಪಂಗೆ ಸಲ್ಲಿಸಬೇಕು ಎಂದರು.
ಬಹದ್ದೂರಬಂಡಿ ಗ್ರಾಪಂ ಅಧ್ಯಕ್ಷ ಯಲ್ಲಪ್ಪ ತಳವಾರ ಮಾತನಾಡಿ, ಗ್ರಾಪಂ ಹಾಗೂ ಅನುಷ್ಠಾನ ಇಲಾಖೆಯ ಕಾಮಗಾರಿಗಳ ಬೇಡಿಕೆ ಪಡೆದ ಮೇಲೆ ವಾರ್ಡ್‌ಸಭೆ, ಗ್ರಾಮಸಭೆಯಲ್ಲಿ ಅನುಮೋದನೆ ಪಡೆದು 2025-26ನೇ ಸಾಲಿನ ಸಮಗ್ರ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಪಂನಿಂದ ಅನುಮೋದನೆ ಪಡೆಯಲಾಗುತ್ತದೆ ಎಂದರು.ರೈತರು, ಮಹಿಳೆಯರಿಂದ ದನದ ಶೆಡ್, ಮೀನು ಸಾಕಾಣಿಕೆ, ನುಗ್ಗೆ, ಬಾಳೆ 14 ವೈಯಕ್ತಿಕ ಕಾಮಗಾರಿಗಳು, 1 ಕೆರೆ ಹೂಳೆತ್ತುವ ಕಾಮಗಾರಿಯ ಬೇಡಿಕೆಯನ್ನು ಗ್ರಾಪಂ ಅಧ್ಯಕ್ಷರು ಇದೇ ಸಂದರ್ಭ ಸ್ವೀಕರಿಸಿದರು.
ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಚಂದ್ರಪ್ಪ ರಾಠೋಡ, ವಿದ್ಯಾಶ್ರೀ, ಮಾರುತಿ ಹರಿಜನ, ಕಮಲಮ್ಮ, ಸೋಮಪ್ಪ ವಾಲಿಕಾರ, ಗ್ರಾಮ ಕಾಯಕ ಮಿತ್ರರಾದ ಭಾಗ್ಯಶ್ರೀ ಹಾದಿಮನಿ, ಕಾಯಕ ಬಂಧು ಮರಿಯಪ್ಪ, ಅನಿತಾ, ಮಂಗಳಾ, ಫಕೀರಪ್ಪ, ಲಕ್ಷ್ಮವ್ವ, ದೇವೇಂದ್ರಪ್ಪ, ವಿಜಯ ಕೂಲಿಕಾರರು, ಗ್ರಾಮದ ಸಾರ್ವಜನಿಕರು ಇದ್ದರು.